ಬೆಂಗಳೂರು,ಅ.15-ಒಂದೆಡೆ ಉಪಚುನಾವಣೆ ಸಮರಕ್ಕೆ ಪ್ರಮುಖ ಮೂರು ಪಕ್ಷಗಳಲ್ಲಿ ಪ್ರಚಾರದ ಕಾವು ರಂಗೇರುತ್ತಿದ್ದರೆ, ಮತ್ತೊಂದೆಡೆ ಬಂಡಾಯದ ಕಾವು ಹೆಚ್ಚಾಗಿದೆ.
ಮೇಲ್ನೋಟಕ್ಕೆ ಜೆಡಿಎಸ್ ರಾಮನಗರ ಮತ್ತು ಮಂಡ್ಯ ಕ್ಷೇತ್ರಗಳು ಭಿನ್ನಮತದಿಂದ ಪಾರಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಮುಂದೆ ನಡೆಯಲಿರುವ ಒಳ ಹೊಡೆತಗಳು ಯಾವ ರೀತಿ ಪರಿಣಾಮ ಬೀರಲಿದೆ ಎಂಬುದು ಮಾತ್ರ ಊಹೆಗೂ ನಿಲುಕದಂತಾಗಿದೆ.
ಬಳ್ಳಾರಿ ಮತ್ತು ಜಮಖಂಡಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ಟಿಕೆಟ್ ವಂಚಿತರ ಬೆಂಬಲಿಗರು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿರುವುದರಿಂದ ಎರಡು ರಾಷ್ಟ್ರೀಯ ಪಕ್ಷಗಳ ಮುಖಂಡರಿಗೆ ನಿದ್ದೆಗೆಡುವಂತೆ ಮಾಡಿದ್ದಾರೆ.
ನ.3ರಂದು ನಡೆಯಲಿರುವ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ಹಾಗೂ ಕೆಲವು ಕಡೆ ಕ್ಷೇತ್ರಗಳನ್ನು ಬಿಟ್ಟುಕೊಟ್ಟಿರುವುದರಿಂದ ಅಸಮಾಧಾನಗೊಂಡಿರುವ ಕೆಲವರು ಬಂಡಾಯದ ಬಿಸಿ ಮುಟ್ಟಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ರಾಮನಗರದಲ್ಲಿ ಸಂಸದ ಸುರೇಶ್ ಮಧ್ಯಪ್ರವೇಶದಿಂದ ಕಾಂಗ್ರೆಸ್ ನಾಯಕರ ಮುನಿಸು ತುಸು ಶಮನಗೊಂಡಿದೆ. ಆದರೆ ವಿಧಾನಪರಿಷತ್ ಸದಸ್ಯ ಕಾಂಗ್ರೆಸ್ ಕಟ್ಟಾ ಬೆಂಬಲಿಗ ಸಿ.ಎಂ.ಲಿಂಗಪ್ಪ ನಡೆ ಮಾತ್ರ ಏನೆಂಬುದು ಈವರೆಗೂ ಬಹಿರಂಗಗೊಂಡಿಲ್ಲ.
ಇಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಕೆಲವರು ಪ್ರಚಾರ ನಡೆಸುವುದಿಲ್ಲ ಎಂದು ಪಟ್ಟು ಹಿಡಿದಿರುವುದು ಅಭ್ಯರ್ಥಿಗೆ ತೊಡಕಾಗಲಿದೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಕೊನೆ ಕ್ಷಣದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಭಿನ್ನಮತೀಯರ ಮನವೊಲಿಸಿ ಬಿಕ್ಕಟ್ಟು ಶಮನಗೊಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ನಲ್ಲಿ ಟ್ರಬಲ್ ಶೂಟರ್ ಎಂದೇ ಹಾಳಲಾಗುತ್ತಿರುವ ಡಿಕೆಶಿ ಆಗಮನಕ್ಕಾಗಿಯೇ ಜಿಲ್ಲಾ ನಾಯಕರು ಎದುರು ನೋಡುತ್ತಿದ್ದಾರೆ. ಇನ್ನು ಮಂಡ್ಯದಲ್ಲೂ ಕೂಡ ಪರಿಸ್ಥಿತಿ ಭಿನ್ನವಾಗಿಲ್ಲ.
ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಮಾಜಿ ಶಾಸಕರಾದ ಚಲುವರಾಯಸ್ವಾಮಿ, ರಮೇಶ್ ಬಂಡಿ ಸಿದ್ದೇಗೌಡ ಸೇರಿದಂತೆ ಮತ್ತಿತರ ನಾಯಕರ ಮುನಿಸು ಮಾತ್ರ ಇನ್ನು ಶಮನವಾಗಿಲ್ಲ.
ಜೆಡಿಎಸ್ ಅಭ್ಯರ್ಥಿಗೂ ನಮಗೂ ಸಂಬಂಧವೇ ಇಲ್ಲ ಎಂದು ಚೆಲುವರಾಯಸ್ವಾಮಿ ಹೇಳಿದ್ದರು. ಕೊನೆ ಕ್ಷಣದವರೆಗೂ ಕಾಂಗ್ರೆಸ್ ವತಿಯಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ವರಿಷ್ಠರ ಮೇಲೆ ಒತ್ತಡ ಹಾಕಿದ್ದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರ ನಡೆ ಎತ್ತ ಕಡೆ ಎಂಬಂತಾಗಿದೆ.
ಬಿಜೆಪಿಯಿಂದ ಡಾ.ಸಿದ್ದರಾಮಯ್ಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರೂ ಅವರಿಗೂ ಕೂಡ ಬಂಡಾಯದ ಬಿಸಿ ತಟ್ಟಿದೆ. ಟಿಕೆಟ್ ವಂಚಿತರು ಈಗಾಗಲೇ ಬಂಡಾಯದ ಕಹಳೆ ಊದಿದ್ದಾರೆ. ಮುಖಂಡರಾದ ಆರ್.ಅಶೋಕ್, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಕೆಲವರು ಮನವೊಲಿಸುವ ಕಸರತ್ತಿಗೆ ಕೈ ಹಾಕಿದ್ದಾರೆ.
ಶಿವಮೊಗ್ಗದಲ್ಲೂ ಕಾಂಗ್ರೆಸ್-ಜೆಡಿಎಸ್ ಒಮ್ಮತದ ಅಭ್ಯರ್ಥಿಯಾಗಿ ಮಾಜಿ ಶಾಸಕ ಮಧುಬಂಗಾರಪ್ಪ ಸ್ಪರ್ಧಿಸುತ್ತಿದ್ದಾರೆ. ಮೇಲ್ನೋಟಕ್ಕೆ ಹೇಳಿಕೊಳ್ಳುವಂತಹ ಭಿನ್ನಮತ ಇಲ್ಲದಿದ್ದರೂ ಒಳಗೊಳಗೆ ಮಾತ್ರ ಬಂಡಾಯಗಾರರು ಬುಸುಗುಡುತ್ತಿದ್ದಾರೆ.
ಉಪಚುನಾವಣೆಯಲ್ಲಿ ಭಿನ್ನಮತದ ಕಾವು ಹೆಚ್ಚು ಕಾಣಿಸಿಕೊಂಡಿರುವುದೇ ಬಳ್ಳಾರಿ ಮತ್ತು ಜಮಖಂಡಿ ಕ್ಷೇತ್ರದಲ್ಲಿ.
ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಆಕಾಂಕ್ಷಿಯಾಗಿದ್ದ ಖ್ಯಾತ ಮಾನಸಿಕ ತಜ್ಞ ಡಾ.ಶ್ರೀನಿವಾಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಈ ಕ್ಷೇತ್ರದಿಂದ ಶಾಸಕ ಶ್ರೀರಾಮುಲು ಸಹೋದರಿ ಜೆ.ಶಾಂತ ಸ್ಪರ್ಧಿಸುತ್ತಿರುವುದಕ್ಕೆ ಅವರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಮಖಂಡಿಯಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಬಂಡಾಯದ ಬಿಸಿ ತಟ್ಟಿದೆ. ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಮುಖಂಡ ಬಸವರಾಜ ಸಿಂಧೂರ ಅತೃಪ್ತರ ಜೊತೆ ಸಭೆ ನಡೆಸಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ತಮ್ಮ ಆಪ್ತ ಉಮೇಶ್ ಬಳಶೆಟ್ಟಿ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸುವ ಮೂಲಕ ಬಿಜೆಪಿಗೆ ಚುರುಕು ಮುಟ್ಟಿಸಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿಗೆ ಬೆಂಬಲ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಕಾಂಗ್ರೆಸ್ ಕೂಡ ಬಂಡಾಯದಿಂದ ಹೊರತಾಗಿಲ್ಲ. ಜಮಖಂಡಿ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸನತ್ಕುಮಾರ್ ಬೆಳಗಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬೆದರಿಕೆವೊಡ್ಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಡೆ ಕ್ಷಣದವರೆಗೂ ಮನವೊಲಿಸುವ ಪ್ರಯತ್ನ ಮುಂದುವರೆಸಿದ್ದಾರೆ. ಮತ್ತೊಂದೆಡೆ ಯಡಿಯೂರಪ್ಪ ಕೂಡ ಭಿನ್ನಮತೀಯರ ಜೊತೆ ಮಾತನಾಡಿ, ಯಾವುದೇ ಆತುರದ ನಿರ್ಧಾರ ಕೈಗೊಳ್ಳಬಾರದೆಂದು ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ ಉಪಚುನಾವಣೆಯ ಸಮರದಲ್ಲಿ ಮೂರು ಪಕ್ಷಗಳಲ್ಲೂ ಭಿನ್ನಮತ ಎದ್ದಿರುವುದು ಬಿಸಿ ತುಪ್ಪವಾಗಿ ಪರಿಣಮಿಸಿದೆ.