ಬೆಂಗಳೂರು, ಅ.15- ಪ್ರಸಕ್ತ ಉಪ ಚುನಾವಣೆಯೂ ರಾಜ್ಯದಲ್ಲಿ ಕುಟುಂಬ ರಾಜಕಾರಣಕ್ಕೆ ಎಷ್ಟು ಒತ್ತು ಸಿಕ್ಕಿದೆ ಎನ್ನುವುದಕ್ಕೆ ಉದಾಹರಣೆಯಾಗಿದೆ.
ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಉಪಚುನಾವಣೆಯಲ್ಲಿ ಬಹುತೇಕ ಕ್ಷೇತ್ರಗಳಿಗೆ ಎಲ್ಲಾ ಅಭ್ಯರ್ಥಿಗಳ ಆಯ್ಕೆ ಬಹುತೇಕ ಅಂತಿಮವಾಗಿದೆ. ಬಳ್ಳಾರಿ ಹೊರತುಪಡಿಸಿದರೆ ಉಳಿದೆಲ್ಲಾ ಕ್ಷೇತ್ರಕ್ಕೆ ಆಯ್ಕೆ ಅಂತಿಮವಾಗಿದೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಂತಿಮವಾಗಬೇಕು. ಮಂಡ್ಯ ಹೊರತುಪಡಿಸಿದರೆ ಉಳಿದೆಡೆ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಒಟ್ಟು ಐದು ಕ್ಷೇತ್ರಗಳ ಪೈಕಿ ಶಿವಮೊಗ್ಗ, ಬಳ್ಳಾರಿ, ಮಂಡ್ಯ ಲೋಕಸಭೆ ಕ್ಷೇತ್ರಗಳಾದರೆ, ಉಳಿದಂತೆ ರಾಮನಗರ ಹಾಗೂ ಜಮಖಂಡಿ ವಿಧಾನಸಭೆ ಕ್ಷೇತ್ರಗಳು.
ಶಿವಮೊಗ್ಗ ಲೋಕಸಭೆ:ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಉಮೇದುವಾರಿಕೆಯನ್ನು ಮೂವರು ಮಾಜಿ ಮುಖ್ಯಮಂತ್ರಿಗಳ ಪುತ್ರರು ಮಾಡುತ್ತಿರುವುದು ವಿಶೇಷ. ಇಲ್ಲಿ ಕಾಂಗ್ರೆಸï-ಜೆಡಿಎಸ್ ಮೈತ್ರಿಪಕ್ಷದ ಪರವಾಗಿ ಮಾಜಿ ಸಿಎಂ ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪ ಕಣಕ್ಕಿಳಿಯುತ್ತಿದ್ದಾರೆ. ಬಿಜೆಪಿಯಿಂದ ಮಾಜಿ ಸಿಎಂ ಬಿ.ಎಸï. ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ ಅಖಾಡಕ್ಕಿಳಿದರೆ, ಜೆಡಿಯುನಿಂದ ಮಾಜಿ ಸಿಎಂ ಜೆ.ಹೆಚï. ಪಟೇಲ್ ಪುತ್ರ ಮಹಿಮಾ ಪಟೇಲ್ ಕಣಕ್ಕಿಳಿಯುತ್ತಿದ್ದಾರೆ.
ಮಂಡ್ಯ ಲೋಕಸಭೆ: ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಕೂಡ ಕಾಂಗ್ರೆಸï-ಜೆಡಿಎಸ್ ಮೈತ್ರಿ ಪಕ್ಷದಿಂದ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿರುವ ಎಲ್.ಆರ್. ಶಿವರಾಮೇಗೌಡ ಅಭ್ಯರ್ಥಿ. ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ದೊಡ್ಡ ಬೋರೇಗೌಡರ ಸೋದರ ಸಂಬಂ ಡಾ. ಸಿದ್ದರಾಮಯ್ಯ ಅಖಾಡಕ್ಕಿಳಿದಿದ್ದಾರೆ. ದೊಡ್ಡಬೋರೇಗೌಡರು ಕಾಂಗ್ರೆಸ್ ಪಕ್ಷದಿಂದ ಶ್ರೀರಂಗಪಟ್ಟಣ ಹಾಗೂ ಮಂಡ್ಯ ಕ್ಷೇತ್ರದಿಂದ ತಲಾ ಒಂದೊಂದು ಸಾರಿ ಶಾಸಕರಾಗಿದ್ದರು. ಸಿದ್ದರಾಮಯ್ಯ ಕೂಡ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಹೆಚ್ಚುವರಿ ಆಯುಕ್ತರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಬಳ್ಳಾರಿ ಲೋಕಸಭೆ:ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಅದಾಗಲೇ ಬಿಜೆಪಿಯಿಂದ ಶ್ರೀರಾಮುಲು ಸೋದರಿ ಜೆ.ಶಾಂತಾ ಅಭ್ಯರ್ಥಿ ಎನ್ನುವುದು ಪಕ್ಕಾ ಆಗಿದೆ. ಸಂಸದರಾಗಿದ್ದ ಶ್ರೀರಾಮುಲು ರಾಜೀನಾಮೆಯಿಂದ ಕ್ಷೇತ್ರ ತೆರವಾಗಿತ್ತು. ಇದೀಗ ಅವರ ಸೋದರಿ ಇದನ್ನು ಪ್ರತಿನಿಸಿ ಅಖಾಡಕ್ಕಿಳಿದಿದ್ದಾರೆ. ಇನ್ನೊಂದೆಡೆ ಕಾಂಗ್ರೆಸï-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಶಾಸಕ ನಾಗೇಂದ್ರ ಸೋದರ ಕಾಂಗ್ರೆಸïನ ವೆಂಕಟೇಶ್ ಪ್ರಸಾದ್ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ರಾಮನಗರ ವಿಧಾನಸಭೆ:ರಾಮನಗರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದಿಂದ ಸಿಎಂ ಎಚ್.ಡಿ.ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಅಖಾಡಕ್ಕಿಳಿಯುತ್ತಿದ್ದಾರೆ. ಇವರಿಗೆ ಎದುರಾಳಿಯಾಗಿ ಬಿಜೆಪಿಯಿಂದ ಕಾಂಗ್ರೆಸ್ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಅವರ ಪುತ್ರ ಚಂದ್ರಶೇಖರ್ ಕಣಕ್ಕಿಳಿಯುತ್ತಿದ್ದಾರೆ.
ಜಮಖಂಡಿ ವಿಧಾನಸಭೆ:ಜಮಖಂಡಿ ವಿಧಾನಸಭೆ ಕ್ಷೇತ್ರ ಶಾಸಕರಾಗಿದ್ದ ಸಿದ್ದು ನ್ಯಾಮಾಗೌಡರು ಅಪಘಾತದಿಂದ ಸಾವನ್ನಪ್ಪಿದ್ದರಿಂದ ತೆರವಾಗಿತ್ತು. ಇದೀಗ ಈ ಕ್ಷೇತ್ರಕ್ಕೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಆನಂದ್ ನ್ಯಾಮಾಗೌಡ ಕಣಕ್ಕಿಳಿದಿದ್ದಾರೆ.
ಈ ರೀತಿ ಎಲ್ಲಾ ಐದು ಕ್ಷೇತ್ರದಲ್ಲಿಯೂ ಕುಟುಂಬ ರಾಜಕಾರಣಕ್ಕೆ ಒತ್ತು ಕೊಟ್ಟಿರುವುದು ಎದ್ದು ಕಾಣುತ್ತಿದೆ. ರಾಜ್ಯ ರಾಜಕಾರಣದಲ್ಲಿ ಹಿಂದಿನಿಂದಲೂ ಕುಟುಂಬ ಸದಸ್ಯರಿಗೆ ಮಣೆ ಹಾಕುವ ಸಂಪ್ರದಾಯ ಬೆಳೆದುಕೊಂಡೇ ಬಂದಿದ್ದು, ಆದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಒಂದೇ ಸಾರಿ ಕಾಣಿಸಿದ್ದು ಇದೆ ಮೊದಲೆನಿಸುತ್ತಿದೆ.