ಬೆಂಗಳೂರು, ಅ.13- ನಗರದಲ್ಲಿರುವ ಎಲ್ಲ ರುದ್ರಭೂಮಿಗಳ ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಬೇಕಾದ ಅನುದಾನವನ್ನು ಮುಂದಿನ ಬಜೆಟ್ನಲ್ಲಿ ಮೀಸಲಿರಿಸಲಾಗುವುದು ಎಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ತಿಳಿಸಿದರು.
ವಿಲ್ಸನ್ ಗಾರ್ಡನ್ನಲ್ಲಿರುವ ರುದ್ರಭೂಮಿಗೆ ಇಂದು ಬೆಳಗ್ಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತಾ ಕಾರ್ಯ ಹಾಗೂ ಎಲೆಕ್ಟ್ರಿಕ್ ಕ್ರಿಮಿಟೋರಿಯಂ ತಪಾಸಣೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ನಗರದಲ್ಲಿನ ಎಲ್ಲ ರುದ್ರಭೂಮಿಗಳಲ್ಲೂ ಇಂದು ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇತ್ತೀಚೆಗಷ್ಟೆ ಪಿತೃಪಕ್ಷದ ಪೂಜಾ ಕಾರ್ಯಗಳು ಮುಗಿದಿರುವುದರಿಂದ ಸ್ಮಶಾನಗಳಲ್ಲಿ ಕಸದ ರಾಶಿ ಶೇಖರಣೆಯಾಗಿದೆ. ಅಲ್ಲದೆ, ಗಿಡ-ಗಂಟೆಗಳು ಹೆಚ್ಚಾಗಿ ಬೆಳೆದಿದ್ದು, ಓಡಾಡುವುದು ಕಷ್ಟವಾಗಿದೆ.
ಕೆಲವೆಡೆ ಸ್ಪಶಾನಗಳು, ಕ್ರಿಮಿ-ಕೀಟಗಳು, ಪ್ರಾಣಿ-ಪಕ್ಷಿಗಳ ತಾಣವಾಗಿ ಅವ್ಯವಸ್ಥೆಯ ಆಗರವಾಗಿರುವುದು ತಪಾಸಣೆ ವೇಳೆ ಕಂಡುಬಂದಿದ್ದು, ಕೂಡಲೇ ನಗರದ ಎಲ್ಲ ವಲಯಗಳ ಅಧಿಕಾರಿಗಳಿಗೆ ತಕ್ಷಣದಿಂದಲೇ ರುದ್ರಭೂಮಿಗಳನ್ನು ಸ್ವಚ್ಛಪಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ.
ಇನ್ನು ಮುಂದೆ ಶನಿವಾರಗಳಂದು ತೀವ್ರ ಸ್ವಚ್ಛತಾ ಆಂದೋಲನದಡಿ ರುದ್ರಭೂಮಿಗಳ ಸ್ವಚ್ಛತೆ ನಡೆಯಲಿದೆ ಎಂದು ಹೇಳಿದರು.
ಯೋಜನಾ ಬದ್ಧವಾಗಿ ರುದ್ರಭೂಮಿಗಳ ಅಭಿವೃದ್ಧಿ ಕಾರ್ಯವನ್ನು ಚುರುಕುಗೊಳಿಸಲು ವರದಿ ಸಿದ್ಧಪಡಿಸಿ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಈ ವೇಳೆ ವಿಲ್ಸನ್ಗಾರ್ಡನ್ ಹಿಂದೂ ರುದ್ರಭೂಮಿಯಲ್ಲಿನ ಹುಲ್ಲನ್ನು ತೆಗೆಸಿ ಅಲ್ಲಲ್ಲೇ ಬಿದ್ದಿದ್ದ ತ್ಯಾಜ್ಯವನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿತು.
ಶಾಸಕ ಉದಯ್ ಗರುಡಾಚಾರ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಈ ವೇಳೆ ಹಾಜರಿದ್ದರು