ದೊಡ್ಡಗೌಡರ ಮನೆಯಲ್ಲಿ ಟಿಕೆಟ್‌ ಸಂಘರ್ಷ ? ಮಂಡ್ಯ ದಳದ ಟಿಕೆಟ್ ನಿಖಿಲ್‌ಗೋ, ಪ್ರಜ್ವಲ್‌ಗೋ !

ಮಂಡ್ಯಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್‌ ಟಿಕೆಟ್‌ಗಾಗಿ ಮಾಜಿ ಪ್ರಧಾನಿ ಎಚ್‌. ಡಿ. ದೇವೇಗೌಡರ ಕುಟುಂಬದಲ್ಲಿಯೇ ಸ್ಪರ್ಧೆ ಏರ್ಪಟ್ಟಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರ್‌ ಅವರಿಗೆ ದಳದ ಟಿಕೆಟ್‌ ಎಂಬ ಸುದ್ದಿಯ ಬೆನ್ನಲ್ಲಿಯೇ ಪ್ರಜ್ವಲ್‌ ರೇವಣ್ಣ ಹೆಸರೂ ಚಾಲ್ತಿಗೆ ಬಂದಿದೆ. ಒಂದೇ ಕುಟುಂಬದ ಅಣ್ಣ ತಮ್ಮಂದಿರ ಮಕ್ಕಳ ನಡುವೆಯೇ ಟಿಕೆಟ್‌ಗಾಗಿ ಸ್ಪರ್ಧೆ ಏರ್ಪಟ್ಟಿರುವುದು ಕಾರ್ಯಕರ್ತರಿಗೆ ನುಂಗಲಾರದ ತುತ್ತಾಗಿದ್ದು, ಅಂತಿಮ ನಿರ್ಧಾರ ಎಂದಿನಂತೆ ಕುಟುಂಬದ ಖಾವಂದಾರರಾದ ದೊಡ್ಡೇಗೌಡರ ಹೆಗಲೇರಿದೆ ಎಂದು ಆಪ್ತಮೂಲಗಳು ತಿಳಿಸಿವೆ.
ರಾಮನಗರ ವಿಧಾನಸಭೆ ಉಪ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸುತ್ತಿರುವುದರಿಂದ ಮಂಡ್ಯ ಲೋಕಸಭೆ ಉಪ ಚುನಾವಣೆಯಲ್ಲಿ ನಿಖಿಲ್‌ ಬದಲಿಗೆ ತನ್ನ ಪುತ್ರ ಪ್ರಜ್ವಲ್‌ಗೆ ಟಿಕೆಟ್‌ಗೆ ನೀಡಬೇಕೆಂದು ಭವಾನಿ ರೇವಣ್ಣ ಪಟ್ಟು ಹಿಡಿದಿದ್ದಾರೆ.
ಕುಟುಂಬದೊಳಗಿನ ಒಪ್ಪಂದದ ಪ್ರಕಾರ, 2019ರ ಲೋಕಸಭೆ ಚುನಾವಣೆಯಲ್ಲಿ ಹಾಸನದಿಂದ ದೇವೇಗೌಡರು, ಮಂಡ್ಯದಿಂದ ನಿಖಿಲ್‌ಕುಮಾರ್‌, ಮೈಸೂರಿನಿಂದ ಪ್ರಜ್ವಲ್‌ ರೇವಣ್ಣ ಸ್ಪರ್ಧೆ ಮಾಡುವುದೆಂದು ನಿರ್ಧಾರವಾಗಿತ್ತು. ಇದರ ಭಾಗವಾಗಿಯೇ, ಮರು ಚುನಾವಣೆಯಲ್ಲಿ ನಿಖಿಲ್‌ ಕುಮಾರ್‌ ಅವರನ್ನು ಸ್ಪರ್ಧೆಗಿಳಿಸಲು ತಯಾರಿ ನಡೆದಿತ್ತು. ಆದರೆ ಒಮ್ಮೆಲೆ ಈ ಸೂತ್ರದ ಬಗ್ಗೆ ಭವಾನಿ ರೇವಣ್ಣ ಅಪಸ್ವರ ಎತ್ತಿದ್ದಾರೆ. ಮೊದಲ ಕಾರಣ, ಅನಿತಾ ಅವರಿಗೆ ರಾಮನಗರ ಟಿಕೆಟ್‌ ಘೋಷಣೆಯಾಗಿರುವುದು.
ಎರಡನೆಯದು- ತಮ್ಮ ಪುತ್ರ ಪ್ರಜ್ವಲ್‌ಗೆ ಒಪ್ಪಂದದಂತೆ ನಿಗದಿಯಾಗಿರುವ ಮೈಸೂರು ಲೋಕಸಭೆ ಕ್ಷೇತ್ರ ಸುರಕ್ಷಿತವಲ್ಲ ಎಂಬ ಭಾವನೆ. ಕಾಂಗ್ರೆಸ್‌, ಬಿಜೆಪಿ ಪಕ್ಷಗಳು ಸಮಾನ ಪ್ರಾಬಲ್ಯವಿರುವ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಹೋಲಿಸಿದರೆ ಮಂಡ್ಯ ಲೋಕಸಭೆ ಕ್ಷೇತ್ರ ಜೆಡಿಎಸ್‌ ಪಾಲಿಗೆ ಸುಲಭದ ತುತ್ತು. ಒಂದು ವೇಳೆ ಮೈಸೂರಿನಿಂದ ಸ್ಪರ್ಧಿಸಿದ್ರೆ ಗೆಲುವಿಗಾಗಿ ಕಷ್ಟಪಡಬೇಕಾಗುತ್ತದೆ. ಸ್ವಲ್ಪ ಎಡವಿದರೂ ಪ್ರಜ್ವಲ್‌ ಸ್ಥಿತಿ ಚಕ್ರವ್ಯೂಹ ಪ್ರವೇಶಿಸಿದ ಅಭಿಮನ್ಯವಿನಂತಾಗುತ್ತದೆ ಎಂದು ರೇವಣ್ಣ ಆಪ್ತರು ಭವಾನಿ ಅವರಿಗೆ ಮಾಹಿತಿ ನೀಡಿದ್ದಾರೆ. ಹಾಗಾಗಿ, ಮುಂದಿನ ಲೋಕಸಭೆಯಲ್ಲಿ ಪ್ರಜ್ವಲ್‌ಗೆ ಟಿಕೆಟ್‌ ನೀಡುವುದಿದ್ದರೆ ಹಾಸನ ಇಲ್ಲವೇ ಮಂಡ್ಯ ಕ್ಷೇತ್ರದಿಂದಲೇ ನೀಡಲಿ ಎಂವ ಹೊಸ ಷರತ್ತನ್ನು ದೊಡ್ಡೇಗೌಡರ ಮುಂದೆ ಇಟ್ಟಿದ್ದಾರೆ ಎನ್ನಲಾಗಿದೆ. ಕಳೆದ ಚುನಾವಣೆಯಲ್ಲಿ ಹಾಸನ ಲೋಕಸಭೆಯನ್ನು ಮೊಮ್ಮಗ ಪ್ರಜ್ವಲ್‌ಗೆ ಬಿಟ್ಟುಕೊಡುವುದಾಗಿ ಘೋಷಿಸಿದ್ದ ಎಚ್‌.ಡಿ.ದೇವೇಗೌಡರು, ತಮ್ಮ ನಿರ್ಧಾರವನ್ನು ಪುನರ್‌ ಪರಿಶೀಲನೆಗೆ ಒಡ್ಡಿರುವುದು ಕೂಡ ಭವಾನಿ ಅವರ ಚಿಂತೆಗೆ ಕಾರಣವಾಗಿದೆ. ಹಾಗಾಗಿ, ಈಗಿನಿಂದಲೇ ತಮ್ಮ ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಭವಾನಿ ರೇವಣ್ಣ ಅವರು ವೇದಿಕೆ ಸಿದ್ಧಪಡಿಸುತ್ತಿದ್ದಾರೆ.
ತಮ್ಮ ಕುಟುಂಬದವರನ್ನೇ ಒಂದೊಂದು ಕ್ಷೇತ್ರಗಳಲ್ಲಿ ಕಣಕ್ಕಿಳಿಸಲಾಗುತ್ತದೆ ಎಂಬ ಆರೋಪದಿಂದ ಪಾರಾಗಲು ಕುಟುಂಬದವರ ಹೊರತಾಗಿ ಬೇರೆಯವರಿಗೆ ಅವಕಾಶ ನೀಡುವ ಚಿಂತನೆ ದೇವೇಗೌಡರದ್ದು ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ದೇವೇಗೌಡರ ಕುಟುಂಬದ ನಿಖಿಲ್‌ ಇಲ್ಲವೇ ಪ್ರಜ್ವಲ್‌ ಅವರಲ್ಲದೇ ಹೊರಗಿನವರು ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ನಾಗಮಂಗಲ ಮೂಲದ ನಿವೃತ್ತ ಐಆರ್‌ಎಸ್‌ ಅಧಿಕಾರಿ ಲಕ್ಷ್ಮಿ ಅಶ್ವಿನ್‌ಗೌಡ, ಮಾಜಿ ಶಾಸಕರಾದ ಜಿ.ಬಿ.ಶಿವಕುಮಾರ್‌, ನಾಗಮಂಗಲದ ಎಲ್‌.ಆರ್‌. ಶಿವರಾಮೇಗೌಡ, ಜಿಲ್ಲಾ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ಎ.ಜೆ.ಅಶೋಕ್‌ ಜಯರಾಂ, ವೈದ್ಯ ಡಾ.ಕೃಷ್ಣ ಅವರ ಹೆಸರು ಕೇಳಿಬರುತ್ತಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ