ಮೈಸೂರಿಗೆ ಗುಡ್ ಬೈ ಹೇಳಿದ್ರಾ ಮಾಜಿ ಸಿಎಂ?

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರೂರು ಅರಮನೆ ನಗರಿ ಮೈಸೂರಾಗಿದೆ. ಆದರೆ ಈಗ ದಸರಾ ನಡೆಯುತ್ತಿದ್ದರೂ ಸಿದ್ದರಾಮಯ್ಯ ಅವರು ದೂರ ಇದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ, ಮುಂದಿನ ದಸರಾ ಕೂಡ ನನ್ನ ನೇತೃತ್ವದಲ್ಲಿ ನಡೆಯುತ್ತದೆ ನೋಡಿ ಎಂದು ಕಳೆದ ದಸರಾದಲ್ಲಿ ಅಬ್ಬರಿಸಿದ್ದರು. ಆದರೆ ಈಗ ಅದೇ ಮೈಸೂರಿಗೆ ಹೋಗಲು ನಿರಾಸಕ್ತಿ ತೋರುತ್ತಿದ್ದಾರೆ.

ಸಿದ್ದರಾಮಯ್ಯ ವೈಯುಕ್ತಿವಾಗಿಯೂ ಕೂಡ ಮೈಸೂರು ಪ್ರವಾಸ ಕೈಗೊಳ್ಳುತ್ತಿಲ್ಲ. ಮುಂದಿನ ವಾರ ಬಾಗಲಕೋಟೆ ಜಿಲ್ಲೆಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಮಂಗಳವಾರ ಜಮಖಂಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ ನಾಪಮತ್ರ ಸಲ್ಲಿಕೆ ಇದೆ. ಆದ್ದರಿಂದ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ನವರಾತ್ರಿ ದಿನಗಳಲ್ಲಿ ಮೈಸೂರಿಗೆ ತೆರಳದಿರಲು ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮೈಸೂರು ದಸರಾಗಳನ್ನ ನೋಡಿದ ಬೆಳೆದ ಸಿದ್ದರಾಮಯ್ಯಗೆ ಈಗ ನಿರಾಸಕ್ತಿ ಏಕೆ? ಎಂಬ ಪ್ರಶ್ನೆ ಕೇಳಿಬರುತ್ತಿದೆ. ಸಿದ್ದರಾಮಯ್ಯ ಅವರು ಉಪಚುನಾವಣೆಯ ನೆಪ ಹೇಳಿ ಮೈಸೂರು ಪ್ರವಾಸಕ್ಕೆ ನಿರಾಸಕ್ತಿ ತೋರುತ್ತಿದ್ದಾರೆ. ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರು. ಆದರೆ ಚುನಾವಣೆಯಲ್ಲಿ ಸೋತಿದ್ದರು. ಆದ್ದರಿಂದ ಮುಜುಗರದಿಂದ ಮೈಸೂರಿಗೆ ಹೋಗುತ್ತಿಲ್ಲ ಎನ್ನಲಾಗಿದೆ.

ಸಿದ್ದರಾಮಯ್ಯ ಜಿ.ಟಿ.ದೇವೇಗೌಡರ ವಿರುದ್ಧ ನಿಂತು ಸೋತಿದ್ದರು. ಈಗ ಜಿ.ಟಿ.ದೇವೇಗೌಡರು ಮೈಸೂರು ಉಸ್ತುವಾರಿ ಸಚಿವರು ಇವರ ನೇತ್ವದಲ್ಲಿಯೇ ದಸರಾ ನಡೆಯುತ್ತಿದೆ. ಸಮ್ಮಿಶ್ರ ಸರ್ಕಾರದ ದಸರಾದಲ್ಲಿ ಕಾಂಗ್ರೆಸ್ ಮಂಕಾಗಿ ಜೆಡಿಎಸ್ ರಂಗಾಗಿದೆ. ಯಾಕೆಂದರೆ ಕಾಂಗ್ರೆಸ್ಸಿನ ಮೂವರು ಸಚಿವರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಕೆಲ ಶಾಸಕರು ಆರೋಪಿಸಿದ್ದರು. ದಸರಾ ಉದ್ಘಾಟನೆಯ ದಿನವೂ ಕೆಲ ಕೈ ಶಾಸಕರುಗಳೇ ಗೈರು ಹಾಜರಾಗಿದ್ದರು. ಆನಂತರ ಕಾರ್ಯಕ್ರಮಗಳಲ್ಲೂ ಕಾಂಗ್ರೆಸ್ ಶಾಸಕರು ಬಂದಿರಲಿಲ್ಲ.

ಇವೆಲ್ಲವನ್ನು ಗಮನಿಸಿದ ಸಿದ್ದರಾಮಯ್ಯ ಅವರು, ಜಿ.ಟಿ. ದೇವೇಗೌಡರು ಇರಬೇಕಾದರೆ ನಾನು ಅಲ್ಲಿಗೆ ಹೋಗುವುದು ಸರಿಯಿಲ್ಲ. ನಾನು ಮೈಸೂರಿಗೆ ಹೋಗಿ ಮುಜುಗರ ಆಗೋದು ಬೇಡ ಎಂದು ನಿರ್ಧಾರ ಮಾಡಿದ್ದಾರೆ ಅಂತ ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ