ಬೆಂಗಳೂರು: ಯೋಗರಾಜ ಭಟ್ಟ್ರ ಮುಂದಿನ ಚಿತ್ರ “ಪಂಚತಂತ್ರ” ಕನ್ನಡವಷ್ಟೇ ಅಲ್ಲದೆ ತೆಲುಗು, ಹಿಂದಿಯಲ್ಲಿಯೂ ತಯಾರಾಗುತ್ತಿದೆ. ವಿಹಾನ್ ಹಾಗೂ ಅಕ್ಷರಾ ಗೌಡ ಅಭಿನಯದ ಈ ಚಿತ್ವನ್ನು ತೆಲುಗು ಹಾಗೂ ಹಿಂದಿಯಲ್ಲಿ ಸಹ ಯೋಗರಾಜ್ ಭಟ್ ಅವರೇ ನಿರ್ದೇಶಿಸುತ್ತಿದ್ದಾರೆ ಎನ್ನುವುದು ವಿಶೇಷ.
ತೆಲುಗು ಹಾಗೂ ಹಿಂದಿ ಭಾಷೆ ದೊಡ್ಡ ನಿರ್ಮಾಣ ಸಂಸ್ಥೆಗಳು ಇದಾಗಲೇ ಭಟ್ ಅವರ ಸಂಪರ್ಕದಲ್ಲಿವೆ.ತೆಲುಗು ನಿರ್ಮಾಣ ಸಂಸ್ಥೆಯೊಡನೆ ಮಾತುಕತೆ ಅಂತಿಮ ಘಟ್ಟ ತಲುಪಿದೆ. ಇನ್ನೂ ಹೆಚ್ಚಿನ ವಿವರಗಳನ್ನು ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಬಹಿರಂಗಪಡಿಸಲಾಗುವುದು ಎಂದು ಮೂಲಗಳು ಹೇಳಿದೆ. ಹಿಂದಿ ಭಾಷೆಯ ನಿರ್ಮಾಣ ಸಂಸ್ಥೆ ಜತೆಗೆ ಸಹ ಕೆಲ್ಅವು ಸುತ್ತಿನ ಮಾತುಕತೆಗಳು ನಡೆಯುತ್ತಿದೆ ಎನ್ನುವ ಮಾಹಿತಿ ಇದೆ.
ಚಿತ್ರತಂಡ ಆಯಾ ಭಾಷೆಯ ಚಿತ್ರಗಳಿಗೆ ಅಲ್ಲಿನ ಸ್ಥಳೀಯ ಪ್ರತಿಭೆಗಳನ್ನೇ ಆಯ್ಕೆ ಮಾಡಿಕೊಲ್ಳುವ ಇರಾದೆ ಹೊಂದಿದ್ದು ತೆಲುಗು, ಹಿಂದಿ ಚಿತ್ರದ ತಾಂರಾಂಗಣದಲ್ಲಿ ಯಾರು ಇರಲಿದ್ದಾರೆನ್ನುವುದು ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ. ಇದೆಲ್ಲವೂ ನಿರ್ಮಾಣ ಸಂಸ್ಥೆಗಳು ಹಾಗೂ ಯೋಗರಾಜ್ ಭಟ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ ಬಳಿಕವಷ್ಟೇ ಗೊತ್ತಾಗಲಿದೆ.
“ಮುಂಗಾರು ಮಳೆ” ಚಿತ್ರ ನಿರ್ದೇಶನ ಮಾಡಿದ ದಿನದಿಂದಲೂ ಯೋಗರಾಜ್ ಭಟ್ ಹೆಸರು ಹಿಂದಿ ಹಾಗೂ ದಕ್ಷಿಣ ಭಾರತೀಯ ಭಾಷೆಗಳಲ್ಲಿ ಸಾಕಷ್ಟು ಹೆಸರುವಾಸಿಯಾಗಿದೆ.ಪ್ರೇಮಕಥಾನಕಗಳನ್ನು ತನ್ನದೇ ಶೈಲಿಯ ಸಂಭಾಷಣೆ, ಚಿತ್ರಕಥೆಯಲ್ಲಿ ಅಳವಡಿಸಿ ಹೇಳುವ ಭಟ್ಟರ ವಿಭಿನ್ನ ಪ್ರಯತ್ನಕ್ಕೆ ಸಾಕಷ್ಟು ಅಭಿಮಾನಿಗಳು ಇದ್ದಾರೆ ಎನ್ನುವುದು ಸುಳ್ಳಲ್ಲ.
ಯುವಜನತೆಯನ್ನೇ ಕೇಂದ್ರವಾಗಿಸಿಕೊಂಡು ಹೆಣೆದ ಪಂಚತಂತ್ರದ ಕಥೆಯಲ್ಲಿ ಜನರೇಷನ್ ಗ್ಯಾಪ್ ಬಗೆಗೆ ಸಹ ಹೇಳಲಾಗಿದೆ. ಇನ್ನು ಇದೇ ಅಕ್ಟೋಬರ್ ಅಂತ್ಯಕ್ಕೆ ಚಿತ್ರದ ಆಡಿಯೋ ಲಾಂಚ್ ಆಗುವ ಸಾಧ್ಯತೆ ಇದೆ. ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತವಿದ್ದು ಸುಗಾನ್ ಛಾಯಾಗ್ರಹಣವಿದೆ.ಕಲಾ ನಿರ್ದೇಶಕರಾಗಿ ಶಶಿಧರ್ ಆದಪ್ಪ, ಸಂಕಲನಕಾರರಾಗಿ ಸುರೇಶ್ ಆರ್ಮುಗಂ ಕೆಲಸ ಮಾಡುತ್ತಿದ್ದಾರೆ.