ಬೆಂಗಳೂರು, ಅ.12- ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಸಂಬಂಧ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯ ಪ್ರವೇಶ ಮಾಡಿದ್ದಾರೆ.
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಲವು ಸುತ್ತಿನ ಸಭೆ ನಡೆಸಿದರೂ ಅಭ್ಯರ್ಥಿ ಆಯ್ಕೆ ಯಶಸ್ವಿಯಾಗಿರಲಿಲ್ಲ. ಶಾಸಕ ನಾಗೇಂದ್ರ ಅವರ ಸಹೋದರ ವೆಂಕಟೇಶ್ಪ್ರಸಾದ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ಶಾಸಕರಾದ ಇ.ತುಕಾರಾಮ್, ಪಿ.ಟಿ.ಪರಮೇಶ್ವರ್ನಾಯಕ್, ಆನಂದ್ಸಿಂಗ್, ಅನಿಲ್ ಲಾಡ್ ಮತ್ತಿತರರು ಒಪ್ಪಿರಲಿಲ್ಲ ಹಾಗೂ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಹೀಗಾಗಿ ಬಳ್ಳಾರಿ ಕಗ್ಗಂಟಾಗಿತ್ತು.
ಕೊನೆಗೆ ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಪಿಸಿಸಿ ಕಚೇರಿಯಲ್ಲಿ ಜಿಲ್ಲೆಯ ಎಲ್ಲ ಕಾಂಗ್ರೆಸ್ ಶಾಸಕರು ಹಾಗೂ ಪಕ್ಷದ ಪ್ರಮುಖ ನಾಯಕರ ಜೊತೆ ಸಮಾಲೋಚನೆ ನಡೆಸುವ ಮೂಲಕ ಅಭ್ಯರ್ಥಿಗಳ ಆಯ್ಕೆಯಲ್ಲಿ ಒಮ್ಮತ ಮೂಡಿಸಿದ್ದಾರೆ.
ಶಾಸಕರಾದ ಅನಿಲ್ ಲಾಡ್ ಹೊರತುಪಡಿಸಿ ಉಳಿದ ಎಲ್ಲರೂ ಸಭೆಯಲ್ಲಿ ಭಾಗವಹಿಸಿದ್ದರು. ಇದನ್ನು ಕಂಡು ಖುಷಿಯಾದ ಸಿದ್ದರಾಮಯ್ಯ ಅವರು ಎಲ್ಲರೂ ಒಟ್ಟಾಗಿದ್ದೀರಲ್ಲ ಎಂದು ಹೇಳಿ ಮುಗುಳ್ನಕ್ಕರು.
ಲೋಕಸಭೆ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಕುರಿತು ಇಂದು ಒಮ್ಮತದ ತೀರ್ಮಾನ ತೆಗೆದುಕೊಂಡು ಸಂಜೆ ವೇಳೆಗೆ ಅಭ್ಯರ್ಥಿ ಆಯ್ಕೆ ಮಾಡುವ ಸಾಧ್ಯತೆ ಇದೆ. ಬಹಳ ದಿನಗಳಿಂದ ಸಭೆಯಿಂದ ದೂರ ಉಳಿದಿದ್ದ ಆನಂದ್ಸಿಂಗ್ ಸೇರಿದಂತೆ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದ ಕಾಂಗ್ರೆಸ್ನ ಎಲ್ಲಾ ಶಾಸರಕು ಒಟ್ಟಾಗಿ ಸಭೆಯಲ್ಲಿ ಭಾಗವಹಿಸಿದ್ದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ಗೂಂಡೂರಾವ್, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.