ಬಿಜೆಪಿ ಕುದುರೆ ವ್ಯಾಪಾರ ಬಹಿರಂಗ – ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ಅ.12- ಇನ್ನೆರಡು ತಿಂಗಳಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತದೆ ಎಂದು ಹೇಳುವ ಮೂಲಕ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರು ಬಿಜೆಪಿ ಕುದುರೆ ವ್ಯಾಪಾರ ಮಾಡುವುದನ್ನು ಬಹಿರಂಗ ಪಡಿಸಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್ ಶಾಸಕರು ಹಾಗೂ ನಾಯಕರ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ರಚನೆಗೆ ದಿನಾಂಕ ನಿಗದಿ ಮಾಡುವ ಮೂಲಕ ಕುದುರೆ ವ್ಯಾಪಾರ ಮಾಡುತ್ತಿದ್ದೇವೆ ಎಂದು ಆರ್.ಅಶೋಕ್ ಬಹಿರಂಗವಾಗಿ ಹೇಳಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಶುಭ ಕೋರಿದರು.
ಬಿಜೆಪಿ ಶ್ರೀರಾಮುಲು ಅವರು ನಾವು ಪಾಂಡವರಿದ್ದಂತೆ, ಕಾಂಗ್ರೆಸ್‍ನವರು ಕೌರವರಿದ್ದಂತೆ ಎಂದಿದ್ದಾರೆ. ಪಾಂಡವರೇ ಗೆಲ್ಲುತ್ತೇವೆ ಎಂದೂ ಹೇಳಿಕೊಂಡಿದ್ದಾರೆ. ಹಾಗಿದ್ದರೆ ಶ್ರೀರಾಮುಲು ಅವರು ಬಳ್ಳಾರಿ ಗ್ರಾಮೀಣ ಕ್ಷೇತ್ರವನ್ನು ಬಿಟ್ಟು ಹೋಗಿದ್ದು ಏಕೆ ಎಂದು ಪ್ರಶ್ನಿಸಿದರು.

ಶ್ರೀರಾಮಲು ಬಹಳ ದೊಡ್ಡವರು, ಶ್ರೀರಾಮ ಮತ್ತು ಶ್ರೀರಾಮುಲು ಗೆಲ್ಲಲಿ ಪಾಪ… ಎಂದು ವ್ಯಂಗ್ಯವಾಡಿದರು.
ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ. ನಾವು ಜೆಡಿಎಸ್ ಜೊತೆ ಮೈತ್ರಿಯೊಂದಿಗೆ ಚುನಾವಣೆ ಎದುರಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಬಳ್ಳಾರಿ ಲೋಕಸಭೆಯ ಉಪಚುನಾವಣೆ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ. ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಎಲ್ಲರೂ ಒಟ್ಟಾಗಿದ್ದೇವೆ. ಒಟ್ಟಾಗಿಯೇ ಚುನಾವಣೆ ಎದುರಿಸಿ ಗೆಲ್ಲುತ್ತೇವೆ. ಇಂದು ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಎಲ್ಲರೂ ಭಾಗವಹಿಸಿದ್ದೇವೆ. ಶಾಸಕ ಅನಿಲ್ ಲಾಡ್ ಮಾತ್ರ ಭಾಗವಹಿಸಿಲ್ಲ. ಅವರು ಕೇಂದ್ರ ಸ್ಥಾನದಲ್ಲಿ ಇಲ್ಲದಿರುವುದರಿಂದ ಸಭೆಯಲ್ಲಿ ಭಾಗವಹಿಸಲಿಲ್ಲ ಎಂದು ಹೇಳಿದ್ದಾರೆ ಎಂದರು.

ನಾನು ಪಕ್ಷ ವಹಿಸಿದ ಜವಾಬ್ದಾರಿಯನ್ನಷ್ಟೇ ನಿಭಾಯಿಸುತ್ತಿದ್ದೇನೆ. ಈಗಾಗಲೇ ಜಿಲ್ಲೆಯ ಕಾಂಗ್ರೆಸ್‍ನ ಎಲ್ಲಾ ಶಾಸಕರೊಂದಿಗೆ ಚರ್ಚೆ ನಡೆಸಿದ್ದೇನೆ. ಈ ಚುನಾವಣೆಯಲ್ಲಿ ಜನರು ನೀಡುವ ತೀರ್ಪು ರಾಷ್ಟ್ರಮಟ್ಟಕ್ಕೆ ರವಾನೆಯಾಗುತ್ತದೆ. ಆರು ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಎಸ್‍ಪಿ ಶಾಸಕ ಎನ್. ಮಹೇಶ್ ರಾಜೀನಾಮೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಮಹೇಶ್ ನನ್ನ ಆತ್ಮೀಯ ಸ್ನೇಹಿತ. ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಸಚಿವ ಸಂಪುಟದಲ್ಲೇ ಅವರು ಮುಂದುವರೆದು ಅದೇ ಖಾತೆಯಲ್ಲಿ ಕೆಲಸ ಮಾಡಲಿ ಎಂಬುದು ನಮ್ಮ ಆಶಯ. ರಾಜಕೀಯದಲ್ಲಿ ಎಲ್ಲವೂ ಆಕಸ್ಮಿಕ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಇತ್ತೀಚಿನ ರಾಜಕೀಯ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಇಂದಿನಿಂದ ಗುರು ಬದಲಾಗಿದ್ದಾನೆ. ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಮಾರ್ಮಿಕವಾಗಿ ಹೇಳುವ ಮೂಲಕ ಡಿಕೆಶಿ ಕುತೂಹಲ ಕೆರಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ