ಬೆಂಗಳೂರು, ಅ.12- ಈಗಾಗಲೇ ವಿಧಾನಸಭೆ ಮತ್ತು ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯಲು ಮುಂದಾಗಿ ಮುಖಭಂಗಕ್ಕೊಳಗಾಗಿದ್ದ ಬಿಜೆಪಿ ಮತ್ತೊಮ್ಮೆ ಸದ್ದಿಲ್ಲದೆ ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸುವ ಆಪರೇಷನ್ಗೆ ಕೈ ಹಾಕಿದೆ.
ಇದರ ಮುಂದುವರೆದ ಭಾಗವಾಗಿಯೇ ಈಗಾಗಲೇ ರಾಮನಗರದಲ್ಲಿ ವಿಧಾನಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪನವರ ಪುತ್ರ ಚಂದ್ರಶೇಖರ್ ಮಂಡ್ಯದಲ್ಲಿ ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ ಡಾ.ಸಿದ್ದರಾಮಯ್ಯ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ.
ಇದೀಗ ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಲ್ಲಿರುವ ಕೆಲವು ಅತೃಪ್ತ ಶಾಸಕರನ್ನು ಸೆಳೆದು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಮತ್ತೆ ಬಿಸಿ ಮುಟ್ಟಿಸಲು ಮುಂದಾಗಿದೆ.
ಈ ಬಾರಿ ಯಾವುದೇ ಕಾರಣಕ್ಕೂ ಆಪರೇಷನ್ ವಿಫಲವಾಗದಂತೆ ಅತ್ಯಂತ ಎಚ್ಚರಿಕೆ ಹೆಜ್ಜೆ ಇಟ್ಟಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ , ಇದಕ್ಕಾಗಿ ನಂಬಿಗಸ್ಥ ಮೂರು ತಂಡಗಳನ್ನು ರಚಿಸಿಕೊಂಡಿದ್ದಾರೆ.
ಸದ್ಯಕ್ಕೆ ಪಿತೃಪಕ್ಷ ಇರುವ ಕಾರಣ ಆಪರೇಷನ್ ಕಮಲ ವಿಳಂಬವಾಗಿದ್ದು, ಉಪಚುನಾವಣೆ ಫಲಿತಾಂಶ ಪ್ರಕಟವಾದ ಮರುದಿನದಿಂದಲೇ ಶಾಸಕರನ್ನು ಸೆಳೆಯುವ ಕಾರ್ಯಾಚರಣೆ ಆರಂಭವಾಗಲಿದೆ ಎಂದು ತಿಳಿದುಬಂದಿದೆ.
ಮೂರು ತಂಡ ರಚನೆ:
ಕಳೆದ ಬಾರಿ ಯಡಿಯೂರಪ್ಪ ಶಾಸಕರನ್ನು ಕರೆತರುವುದಕ್ಕಾಗಿಯೇ ಗೌಪ್ಯವಾಗಿ ತಂಡವನ್ನು ರಚಿಸಿಕೊಂಡಿದ್ದರು. ಶಾಸಕರು ಶ್ರೀರಾಮುಲು ನೇತೃತ್ವದಲ್ಲಿ ಸದ್ದಿಲ್ಲದೆ ಕಾರ್ಯಾಚರಣೆ ನಡೆದು ಒಂದು ಹಂತಕ್ಕೆ ದೋಸ್ತಿ ಸರ್ಕಾರ ಪತನವಾಯಿತು ಎಂಬ ಸನ್ನಿವೇಶ ಸೃಷ್ಟಿಯಾಗಿತ್ತು.
ತಕ್ಷಣವೇ ಸಮನ್ವಯ ಸಮಿತಿ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶ ಮಾಡಿದ್ದರಿಂದ ಸಮಸ್ಯೆ ತುಸು ಇತ್ಯರ್ಥವಾಗಿತ್ತು. ಆದರೆ ಈಗ ಆಪರೇಷನ್ ನಡೆಸಲು ಬಿಎಸ್ವೈ ಮೂರು ತಂಡಗಳನ್ನು ರಚಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು-ಮೈಸೂರು ಭಾಗದಲ್ಲಿರುವ ಶಾಸಕರನ್ನು ಪಕ್ಷಕ್ಕೆ ಕರೆತರುವ ಹೊಣೆಗಾರಿಕೆಯನ್ನು ಶಾಸಕ ಆರ್.ಅಶೋಕ್ ಹಾಗೂ ಸಿ.ಪಿ.ಯೋಗೇಶ್ವರ್ ಹೆಗಲಿಗೆ ನೀಡಲಾಗಿದೆ.
ಬಳ್ಳಾರಿ ಹಾಗೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿರುವ ಶಾಸಕರನ್ನು ಸೆಳೆಯುವ ಜವಾಬ್ದಾರಿಯನ್ನು ವಾಲ್ಮೀಕಿ ಸಮುದಾಯದ ಮುಖಂಡ ಹಾಗೂ ಶಾಸಕ ಶ್ರೀರಾಮುಲು ಅವರಿಗೆ ವಹಿಸಲಾಗಿದೆ.
ಮುಂಬೈ ಕರ್ನಾಟಕ ಭಾಗದ ಶಾಸಕರನ್ನು ಸೆಳೆಯಲು ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಹಾಗೂ ಶಾಸಕ ಉಮೇಶ್ ಕತ್ತಿಗೆ ನೀಡಲಾಗಿದೆ. ಇದೆಲ್ಲದರ ಜೊತೆಗೆ ಕೆಲವು ಲಿಂಗಾಯಿತ ಸಮುದಾಯದ ಶಾಸಕರನ್ನು ಯಡಿಯೂರಪ್ಪನವರೇ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.
ಸದ್ಯಕ್ಕೆ ರಾಜ್ಯದಲ್ಲಿ ಮೂರು ಲೋಕಸಭಾ ಕ್ಷೇತ್ರ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಡೆಯಲಿದೆ. ಈಗಾಗಲೇ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಸಂಬಂಧ ಕಾಂಗ್ರೆಸ್ನಲ್ಲಿ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.
ಈ ಲಾಭವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ಮುಂದಾಗಿರುವ ಬಿಜೆಪಿ ಅತೃಪ್ತರಿಗೆ ಗಾಳ ಹಾಕುತ್ತಿದೆ. ಇನ್ನು ಪಕ್ಷೇತರ ಶಾಸಕರಾಗಿ ಸರ್ಕಾರಕ್ಕೆ ಬೆಂಬಲ ನೀಡಿರುವ ಆರ್.ಶಂಕರ್ ಯಾವುದೇ ಸಂದರ್ಭದಲ್ಲೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಕಮಲವನ್ನು ಮುಡಿಗೇರಿಸಿಕೊಳ್ಳುವ ತವಕದಲ್ಲಿದ್ದಾರೆ.
ಇತ್ತೀಚೆಗೆ ಆರ್.ಶಂಕರ್ಗೆ ಕಾಂಗ್ರೆಸ್ಗೆ ಸೇರ್ಪಡೆಯಾಗುವಂತೆ ಕೆಲವರು ಒತ್ತಡ ಹಾಕಿದ್ದರು. ತಾವು ಕಾಂಗ್ರೆಸ್ಗೆ ಸೇರುವುದಾಗಿ ಶಂಕರ್ ಹೇಳಿದ್ದರೂ ಸರ್ಕಾರದಲ್ಲ ನಡೆಯುತ್ತಿರುವ ಕೆಲವು ಬೆಳವಣಿಗೆಗಳಿಂದ ಬೇಸರಗೊಂಡು ದೋಸ್ತಿ ಸರ್ಕಾರಕ್ಕೆ ಸೋಡ ಚೀಟಿ ನೀಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಮುಳಬಾಗಿಲು ಶಾಸಕ ನಾಗೇಶ್ ಬಿಜೆಪಿ ಸಂಪರ್ಕದಲ್ಲಿದ್ದು, ಯಾವುದೆ ಸಂದರ್ಭದಲ್ಲೇ ಆದರೂ ನಾನು ಬೆಂಬಲ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ನಿನ್ನೆಯಷ್ಟೇ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದು ಸಮ್ಮಿಶ್ರ ಸರ್ಕಾರಕ್ಕೆ ತೀವ್ರ ಮುಜುಗರವಾಗಿದ್ದು, ಕೆಲ ಶಾಸಕರು ಲೋಕಸಭೆ ಚುನಾವಣೆ ವೇಳೆ ನಮಗೆ ಹಿನ್ನಡೆಯಾಗಲಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಯಾವ ಸದುದ್ದೇಶ ಇಟ್ಟುಕೊಂಡು ಸರ್ಕಾರ ರಚನೆ ಮಾಡಲಾಗಿತ್ತೋ ಆ ಉದ್ದೇಶವೇ ಈಡೇರುತ್ತಿಲ್ಲ. ಇದು ಕೆಲವರ ಹಿತಕ್ಕಾಗಿ ಇರುವ ಸರ್ಕಾರ. ಯಾವ ಕಾರಣಕ್ಕಾಗಿ ಮುಂದುವರೆಯಬೇಕೆಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ಲೋಕಸಭೆಗೆ ಹಿನ್ನಡೆ:
ರಾಜ್ಯದಲ್ಲಿ ಆಪರೇಷನ್ ಕಮಲ ನಡೆಸದಿದ್ದರೆ ಲೋಕಸಭೆ ಚುನಾವಣೆಯಲ್ಲಿ ನಮಗೆ ಹಿನ್ನಡೆಯಾಗುತ್ತದೆ ಎಂಬುದು ಯಡಿಯೂರಪ್ಪನವರ ಆತಂಕ. ದೋಸ್ತಿ ಸರ್ಕಾರ ಮುಂದುವರೆದರೆ ನಮಗೆ ನಿರೀಕ್ಷಿತ ಪ್ರಮಾಣದಲ್ಲಿ ಸ್ಥಾನ ಗಳಿಸಲು ಸಾಧ್ಯವಾಗುವುದಿಲ್ಲ. ಹೆಚ್ಚೆಂದರೆ 28 ಸ್ಥಾನಗಳ ಪೈಕಿ 10ರಿಂದ 12 ಸ್ಥಾನ ಗೆಲ್ಲಬಹುದು. ಒಂದು ವೇಳೆ ನಾವು ಸರ್ಕಾರ ರಚನೆ ಮಾಡಿದರೆ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು ಎಂಬುದು ಬಿಎಸ್ವೈ ಲೆಕ್ಕಾಚಾರ.
ಹೀಗಾಗಿಯೇ ಉಪಚುನಾವಣೆ ಫಲಿತಾಂಶದ ಬಳಿಕ ಶಾಸಕರನ್ನು ಕರೆತರುವ ಆಪರೇಷನ್ ಸರ್ಜರಿಗೆ ಬಿಜೆಪಿ ಕೈ ಹಾಕಿದೆ.