ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ; ಅಗತ್ಯ ಕ್ರಮ – ಮುಖ್ಯಮಂತಿ ಭರವಸೆ

ಬೆಂಗಳೂರು, ಅ.12- ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯ ಬಗ್ಗೆ ವ್ಯಾಖ್ಯಾನ ಮಾಡಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಕುರಿತ ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಅವರೊಂದಿಗೆ ಈ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನಕ್ಕೆ ಬರುವುದಾಗಿ ತಿಳಿಸಿದರು.
ಸಮುದಾಯದ ಎಲ್ಲ ಮುಖಂಡರು ಹಾಗೂ ಪರ-ವಿರೋಧಿಗಳ ಅಭಿಪ್ರಾಯ ಪಡೆದು ಕ್ರಮ ವಹಿಸುವ ಭರವಸೆ ನೀಡಿದರು.

ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ ಖರ್ಗೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪರಿಶಿಷ್ಟ ಜಾತಿ-ಸಮುದಾಯದ ಎಲ್ಲ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಸಮುದಾಯದವರೆಲ್ಲ ಒಗ್ಗೂಡಲು ಸರ್ವಸಮ್ಮತವಾಗಿ ತೀರ್ಮಾನ ಕೈಗೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ ಎಂದರು.

ಹಿಂದಿನ ಸರ್ಕಾರದ ಈ ವರದಿ ಬಗ್ಗೆ ಸಂಪುಟ ಉಪಸಮಿತಿ ರಚಿಸಿದ್ದು, ಸಂಪುಟ ಸಭೆಗೆ ಆಯೋಗದ ವರದಿ ಮಂಡಿಸಿದಾಗ ಅದು ಸಾರ್ವಜನಿಕ ಆಸ್ತಿಯಾಗುತ್ತದೆ. ಅದು ಅಧಿಕೃತವಾಗಿ ಸರ್ಕಾರದಿಂದ ಸ್ವೀಕೃತವಾಗಬೇಕು. ವರದಿ ಬಗ್ಗೆ ಆತಂಕ ದೂರ ಮಾಡಿ ವಿರೋಧಿಗಳ ಮನವೊಲಿಸಿ ಶೀಘ್ರವಾಗಿ ಜಾರಿಗೊಳಿಸಲು ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ನೌಕರರ ಬಡ್ತಿ ಮೀಸಲಾತಿ ಕುರಿತಂತೆ ಸುಪ್ರೀಂಕೋರ್ಟ್‍ಗೆ ರಾಜ್ಯ ಸರ್ಕಾರ ಪ್ರಮಾಣ ಪತ್ರ ಸಲ್ಲಿಸಿದೆ. ನ್ಯಾಯಾಲಯ ನೀಡುವ ತೀರ್ಪು ಆಧರಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.

ಮಾಜಿ ಸಚಿವ ಆಂಜನೇಯ ಮಾತನಾಡಿ, ಒಳ ಮೀಸಲಾತಿ ಜಾರಿಗೆ ಬರಬೇಕು. ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಲು ಮಾದಿಗ ಸಮುದಾಯದ ಹೋರಾಟ ಸಮಿತಿ ಒತ್ತಾಯಿಸಿದೆ. ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳಿದ್ದು, ಅವರೆಲ್ಲರ ಅಭಿಪ್ರಾಯ ಪಡೆದು ಸೂಕ್ತ ತೀರ್ಮಾನ ಕೈಗೊಳ್ಳಬೇಕಿದೆ. ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳುವಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿದೆ. ಯಾರನ್ನೂ ಹೊರಹಾಕುವ ಪ್ರಶ್ನೆಯೇ ಇಲ್ಲ ಎಂದರು.

ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ಯಾರಿಗೂ ಅನ್ಯಾಯವಾಗದಂತೆ ಸಮಾಜದ ಮುಖಂಡರೊಂದಿಗೆ ಚರ್ಚಿಸಲಿದ್ದಾರೆ, ವಿರೋಧಿಗಳ ಮನವೊಲಿಸಲಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದೇ ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಮಯಾವಕಾಶ ಕೋರಿದ್ದಾರೆ ಎಂದು ಮಾಹಿತಿ ನೀಡಿದರು.

ಮಾದಿಗ ಮಹಾಸಭಾದ ಮುಖಂಡ ಅಂಬಣ್ಣ ಮಾತನಾಡಿ, 21 ವರ್ಷಗಳಿಂದ ಮಾದಿಗ ಸಮಾಜ ಒಳ ಮೀಸಲಾತಿಗೆ ಒತ್ತಾಯಿಸುತ್ತ ಬಂದಿದೆ. ಮುಖ್ಯಮಂತ್ರಿಗಳು ವರದಿ ಬಗ್ಗೆ ಸ್ಪಷ್ಟ ನಿಲುವು ತಳೆಯುವುದಾಗಿ ತಿಳಿಸಿದ್ದಾರೆ. ಇಂದಿನಿಂದಲೇ ಆ ಕೆಲಸ ಆರಂಭಿಸುವುದಾಗಿಯೂ ಭರವಸೆ ನೀಡಿದ್ದಾರೆ ಎಂದರು.

ಸಭೆಯಲ್ಲಿ ಸಂಸದರಾದ ಕೆ.ಎಚ್.ಮುನಿಯಪ್ಪ, ಡಾ.ಎಲ್.ಹನುಮಂತಯ್ಯ, ಚಂದ್ರಪ್ಪ, ಮಾಜಿ ಸಚಿವರಾದ ಆರ್.ಬಿ.ತಿಮ್ಮಾಪುರ, ಆಲ್ಕೋಡು ಹನುಮಂತಪ್ಪ, ಶಾಸಕ ಧರ್ಮಸೇನ, ನಿವೃತ್ತ ಐಎಎಸ್ ಅಧಿಕಾರಿ ವೆಂಕಟಯ್ಯ, ನ್ಯಾಯಮೂರ್ತಿ ಎ.ಜೆ.ಸದಾಶಿವ ವರದಿ ಅನುಷ್ಠಾನ ಹೋರಾಟ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ