ವಿಶ್ವಸಂಸ್ಥೆ : ಕಳೆದ 2 ದಶಕಗಳಲ್ಲಿ ಪ್ರಾಕೃತಿಕ ವಿಕೋಪದಿಂದ ಭಾರತಕ್ಕೆ ಒಟ್ಟಾರೆ 7,950 ಕೋಟಿ ಡಾಲರ್ ನಷ್ಟವಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ವಿಶ್ವಸಂಸ್ಥೆಯ ಪ್ರಕಾರ, 1998ರಿಂದ 2017ರವರೆಗೆ ನಮ್ಮ ದೇಶದಲ್ಲಿ ಉಂಟಾದ ನೈಸರ್ಗಿಕ ವಿಕೋಪಗಳಾದ ಚಂಡಮಾರುತ, ಪ್ರವಾಹ, ಭೂಕಂಪ, ಸುನಾಮಿಗಳಂತಹ ದುರಂತಗಳಿಂದ 7950 ಕೋಟಿ ಡಾಲರ್ಗೂ ಹೆಚ್ಚು ನಷ್ಟ ಉಂಟಾಗಿದೆ. ಅದರಲ್ಲೂ 2002ನೇ ಇಸವಿ ಅತ್ಯಂತ ಹೆಚ್ಚು ಹಾನಿಗೊಳಗಾದ ವರ್ಷ. ಈ ವರ್ಷ ದೇಶದಲ್ಲಿ ಉಂಟಾದ ಬರಗಾಲದಿಂದ 30 ಕೋಟಿ ಜನರು ತತ್ತರಿಸಿದ್ದರು. ಹಾಗೇ, 2015ರಲ್ಲಿ ಮತ್ತೆ ಭಾರತ ಮತ್ತು ಇತರೆ ದೇಶಗಳಲ್ಲಿ ಬರಗಾಲ ಉಂಟಾಗಿದ್ದರಿಂದಲೂ ಹಲವಾರು ಜನರ ಜೀವನ ಅತಂತ್ರವಾಗಿತ್ತು ಎಂದು ವಿಶ್ವಸಂಸ್ಥೆಯ ವಿಪತ್ತು ಅಪಾಯ ನಿಯಂತ್ರಣ ವರದಿಯಲ್ಲಿ ವಿವರಿಸಲಾಗಿದೆ.
ಹಾಗೇ, ವರ್ಷದಿಂದ ವರ್ಷಕ್ಕೆ ವಾತಾವರಣದಲ್ಲಿ ಉಷ್ಣತೆ ಹೆಚ್ಚುತ್ತಿದ್ದು, ಅಭಿವೃದ್ಧಿಶೀಲ ದೇಶಗಳಿಗೆ ಇದರಿಂದ ಭಾರೀ ಹೊಡೆತವಾಗಲಿದೆ. ಕಳೆದ 20 ವರ್ಷಗಳಲ್ಲಿ ಹವಾಮಾನ ಸಂಬಂಧಿತ ವಿಕೋಪಗಳಿಂದ ಆರ್ಥಿಕ ನಷ್ಟ ದುಪ್ಪಟ್ಟಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಇಪ್ಪತ್ತು ವರ್ಷಗಳಲ್ಲಿ ಉಂಟಾದ ಹಾನಿಯಲ್ಲಿ ಶೇ. 77ರಷ್ಟು ನಷ್ಟ ಹವಾಮಾನಕ್ಕೆ ಸಂಬಂಧಿಸಿದ್ದಾಗಿದೆ.
ಹೆಚ್ಚುತ್ತಿರುವ ಹವಾಮಾನ ವೈಪರೀತ್ಯದಿಂದ ನಲುಗುತ್ತಿರುವ ಭಾರತ, ಹಸಿರುಮನೆ ಅನಿಲ ಹೊರಸೂಸುವಿಕೆಗೆ ಅತ್ಯಂತ ಕಡಿಮೆ ಕೊಡುಗೆ ನೀಡುತ್ತಿದೆ. ಅಧ್ಯಯನದ ವರದಿಯಿಂದ ಈ ಅಂಶ ತಿಳಿದುಬರುತ್ತಿದೆ ಎಂದು ವಿಶ್ವಸಂಸ್ಥೆಯ ಅಧ್ಯಯನ ಕೇಂದ್ರದ ಮುಖ್ಯಸ್ಥ ದೆಬರಾಟಿ ಗುಹಾ-ಸಪೀರ್ ವಿಶ್ಲೇಷಿಸಿದ್ದಾರೆ.