ಬೆಂಗಳೂರು, ಅ.12-ಇತ್ತೀಚಿನ ಬೆಳವಣಿಗೆಯಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕೆಲ ಜೆಡಿಎಸ್ ಶಾಸಕರು ಅಸಮಾಧಾನಗೊಂಡಿದ್ದಾರೆ.
ನವೆಂಬರ್ 3 ರಂದು ನಡೆಯುತ್ತಿರುವ ಮೂರು ಲೋಕಸಭೆ ಹಾಗೂ ಜಮಖಂಡಿ ಹಾಗೂ ರಾಮನಗರ ವಿಧಾನಸಭಾಕ್ಷೇತ್ರಗಳ ಉಪ ಚುನಾವಣೆ ಸಂದರ್ಭದಲ್ಲೇ ಶಾಸಕರ ವಲಯದಲ್ಲಿ ಎದ್ದಿರುವ ಈ ಅಸಮಾಧಾನ ಎಲ್ಲಿಗೆ ಮುಟ್ಟುತ್ತದೆ ಎಂಬ ಆತಂಕ ಶುರುವಾಗಿದೆ.
ಸಿಎಂ ನಮ್ಮವರಾಗಿದ್ದರೂ ನಮ್ಮ ಕ್ಷೇತ್ರದ ಸಮಸ್ಯೆಗಳು, ಕೆಲಸ ಕಾರ್ಯಗಳನ್ನು ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಶಾಸಕರೆಂಬ ಕನಿಷ್ಠ ಗೌರವವೂ ನಮಗೆ ಸಿಗುತ್ತಿಲ್ಲ ಎಂದು ಕೆಲ ಶಾಸಕರು ಗರಂ ಆಗಿದ್ದಾರೆ.
ಮುಂದಿನ ದಿನಗಳಲ್ಲಿ ಹೀಗೇ ಮುಂದುವರೆದರೆ ನಾವು ಕ್ಷೇತ್ರದ ಜನರಿಗೆ ಮುಖ ತೋರಿಸುವುದಾದರೂ ಹೇಗೆ ? ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಎಲ್ಲರ ಮುಂದೆಯೇ ತಮ್ಮ ಕೋಪ ತೋರ್ಪಡಿಸುತ್ತಾರೆ. ಸಿಟ್ಟಿನಿಂದಲೇ ಉತ್ತರಿಸುತ್ತಾರೆ. ಅವರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ ಎಂಬ ಭಾವನೆ ನಮಗೆ ಮೂಡುತ್ತಿದೆ ಎಂದು ಕೆಲ ಶಾಸಕರು ಅಳಲು ತೋಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.