ಎನ್.ಮಹೇಶ್ ರಾಜೀನಾಮೆ -ಕುಮಾರಸ್ವಾಮಿ ಕಾದು ನೋಡುವ ತಂತ್ರ

ಬೆಂಗಳೂರು,ಅ.12- ಸಚಿವ ಸ್ಥಾನಕ್ಕೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ನೀಡಿರುವ ರಾಜೀನಾಮೆ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.

ನಿನ್ನೆ ಸಚಿವರು ರಾಜೀನಾಮೆ ನೀಡಿದ್ದರೂ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮುಂದುವರೆಸುವ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಿಎಸ್‍ಪಿ ನಾಯಕರೊಂದಿಗೆ ಜೆಡಿಎಸ್ ನಾಯಕರ ಮಾತುಕತೆ ಮುಂದುವರೆದಿದ್ದು, ಕಾದು ನೋಡಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ.
ನಿನ್ನೆ ನೀಡಿರುವ ರಾಜೀನಾಮೆಯನ್ನು ಅಂಗೀಕರಿಸಲು ರಾಜ್ಯಪಾಲರಿಗೆ ಮುಖ್ಯಮಂತ್ರಿಗಳು ಶಿಫಾರಸು ಮಾಡಿಲ್ಲ. ಈ ಎಲ್ಲದರ ನಡುವೆ ಕೊಳ್ಳೆಗಾಲ ಕ್ಷೇತ್ರದ ಗ್ರಾಮಸ್ಥರು ರಾಜೀನಾಮೆ ವಾಪಸ್ ಪಡೆಯುವಂತೆ ಸಚಿವರನ್ನು ಆಗ್ರಹಿಸಿದ್ದಾರೆ.

ಜೆಡಿಎಸ್ ವರಿಷ್ಠರು ಬಿಎಸ್‍ಪಿಯ ಮುಖ್ಯಸ್ಥರಾದ ಮಾಯವತಿ ಅವರೊಂದಿಗೆ ಈ ಬಗ್ಗೆ ಮಾತುಕತೆ ನಡೆಸುವ ಸಾಧ್ಯತೆಗಳಿದ್ದು, ಮಾತುಕತೆ ನಂತರವೇ ರಾಜೀನಾಮೆ ಅಂಗೀಕರಿಸಬೇಕೆ ಬೇಡವೇ ಎಂಬ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ.
ಈ ಸಂಬಂಧ ಬಿಎಸ್‍ಪಿಯ ವರಿಷ್ಠರನ್ನು ಮನವೊಲಿಸುವ ಪ್ರಯತ್ನವೂ ನಡೆಯುತ್ತಿದ್ದು ಅದು ಸಫಲವಾದರೆ ರಾಜೀನಾಮೆ ಅಂಗೀಕರಿಸುವ ಪ್ರಮೇಯವಿಲ್ಲ. ಇಲ್ಲದಿದ್ದಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆಯೂ ಚಿಂತನೆ ನಡೆದಿದ್ದು, ಒಟ್ಟಾರೆ ಕಾದು ನೋಡುವ ತಂತ್ರಕ್ಕೆ ಮುಖ್ಯಮಂತ್ರಿ ಮೊರೆ ಹೋಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ