ಬೆಂಗಳೂರು,ಅ.12- ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ನಿಂದ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ವಿಫಲವಾಗಿರುವ ಕಾಂಗ್ರೆಸ್ ನಾಯಕರು ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುವುದೋ ಅವರನ್ನೇ ಬೆಂಬಲಿಸುವ ತೀರ್ಮಾನ ಕೈಗೊಂಡಿದ್ದಾರೆ.
ಅಭ್ಯರ್ಥಿ ಆಯ್ಕೆ ಸಂಬಂಧ ಕಸರತ್ತು ನಡೆಸಿದ ಸಚಿವ ಡಿ.ಕೆ.ಶಿವಕುಮಾರ್ ಅವರ ನಂತರ ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಶಾಸಕರೊಂದಿಗೆ ಮಾತುಕತೆ ನಡೆಸಿದರೂ ಈ ಮಾತುಕತೆ ಯಶಸ್ವಿಯಾಗಲಿಲ್ಲ. ಶಾಸಕರು ತಮ್ಮ ಪ್ರತಿಷ್ಠೆಗೆ ಅಂಟಿಕೊಂಡಿದ್ದರಿಂದ ಸಂಧಾನ ಸೂತ್ರಕ್ಕೆ ಮಣೆ ಹಾಕಲಿಲ್ಲ.
ಹೀಗಾಗಿ ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾತುಕತೆ ಫಲಪ್ರದವಾಗದೆ ಕಡೆಗೆ ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬೆಂಬಲ ಸೂಚಿಸುವ ನಿರ್ಧಾರಕ್ಕೆ ಬರಲಾಯಿತು.
ಇಂದು ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನಗರಕ್ಕೆ ಆಗಮಿಸುತ್ತಿದ್ದು, ನಾಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಹ ಆಗಮಿಸುತ್ತಿರುವುದರಿಂದ ಅವರೊಂದಿಗೆ ಅಂತಿಮ ಸುತ್ತಿನ ಮಾತುಕತೆ ನಡೆಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ ಪ್ರಮುಖವಾಗಿ ವೆಂಕಟೇಶ್ ಪ್ರಸಾದ್, ಕಳೆದ ಬಾರಿ ಕಂಪ್ಲಿಯಿಂದ ಸ್ಪರ್ಧಿಸಿದ್ದ ಲೋಕೇಶ್ ನಾಯಕ, ನೆಟ್ಟಕಲ್ಲಪ್ಪ , ದೇವೇಂದ್ರಪ್ಪ , ಉಗ್ರಪ್ಪ ಸೇರಿದಂತೆ ಹಲವು ಮುಖಂಡರ ಹೆಸರು ಚರ್ಚೆಯಲ್ಲಿವೆ.
ಹೈಕಮಾಂಡ್ ಯಾವುದೇ ನಾಯಕರ ಹೆಸರನ್ನು ಸೂಚಿಸಿದರೂ ಅವರನ್ನು ಬೆಂಬಲಿಸಲು ನಿರ್ಧರಿಸಲಾಗಿದ್ದು, ಇಂದಿನ ಸಭೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತಿತರರು ಉಪಸ್ಥಿತರಿದ್ದರು.