ಬೆಂಗಳೂರು, ಅ.11- ವಿಧಾನಸಭೆಯಿಂದ ವಿಧಾನ ಪರಿಷತ್ಗೆ ಆಯ್ಕೆಗೊಂಡ ಜೆಡಿಎಸ್ನ ರಮೇಶ್ಗೌಡ ಮತ್ತು ಕಾಂಗ್ರೆಸ್ನ ಎಂ.ಸಿ.ವೇಣುಗೋಪಾಲ್ ಇಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ವಿಧಾನಸಭೆಯಿಂದ ಪರಿಷತ್ಗೆ 3 ಮಂದಿ ಅವಿರೋಧ ಆಯ್ಕೆಯಾಗಿದ್ದು , ಇಂದು ಜೆಡಿಎಸ್ ಹಾಗೂ ಕಾಂಗ್ರೆಸ್ನ ತಲಾ ಒಬ್ಬ ಸದಸ್ಯರು ಪ್ರಮಾಣ ವಚನ ಸ್ವೀಕಾರ ಮಾಡಿದರು. ಸಭಾಪತಿ ಬಸವರಾಜ ಹೊರಟ್ಟಿ ಪ್ರಮಾಣ ವಚನ ಬೋಧಿಸಿದರು.
ಜೆಡಿಎಸ್ ರಮೇಶ್ಗೌಡ ಮೊದಲಿಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಚನ್ನಮ್ಮ , ಕುಮಾರಸ್ವಾಮಿ ಹಾಗೂ ರೇವಣ್ಣ ಹೆಸರಲ್ಲಿ ಪ್ರಮಾಣ ಸ್ವೀಕರಿಸಿದರಾದರೂ ತಾಂತ್ರಿಕ ತೊಂದರೆ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪ್ರಮಾಣ ಸ್ವೀಕರಿಸುವಂತೆ ತಿಳಿಸಿದಾಗ ಭಗವಂತನ ಹೆಸರಲ್ಲಿ ಪ್ರಮಾಣ ಸ್ವೀಕರಿಸಿದರು.
ಕಾಂಗ್ರೆಸ್ನ ಎಂ.ಸಿ.ವೇಣುಗೋಪಾಲ್ ಅವರು ಸಚಿವ ಪರಮೇಶ್ವರ್ ಅವರಿಗಾಗಿ ಕಾದು ಅವರು ಬಂದ ನಂತರ ಭಗವಂತನ ಹೆಸರಲ್ಲಿ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದರು.
ಡಾ.ಜಿ.ಪರಮೇಶ್ವರ್, ಶಿವಶಂಕರ ರೆಡ್ಡಿ, ರಿಜ್ವಾನ್ ಅರ್ಷದ್, ಎಸ್.ಪಿ.ಮುದ್ದಹನುಮೇಗೌಡ, ಸಚಿವ ವೆಂಕಟರಮಣಪ್ಪ ಸೇರಿದಂತೆ ಹಲವರ ಉಪಸ್ಥಿತಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ನಂತರ ಮಾತನಾಡಿದ ರಮೇಶಗೌಡ ಮಾಧ್ಯಮಗಳ ಸಹಕಾರದಿಂದ ತಾವು ಇಂದು ಈ ಮಟ್ಟಕ್ಕೆ ಬಂದಿದ್ದೇವೆ. ನಿಮ್ಮ ಸಹಕಾರ ಇದೇ ರೀತಿ ಇರಲಿ ಎಂದು ಹೇಳಿದರು.
ರಮೇಶ್ಗೌಡ ಅವರ ಮೇಲಿನ ಆರೋಪಗಳ ಕುರಿತಂತೆ ಕೇಳಿದ ಪ್ರಶ್ನೆಗೆ ಆರೋಪಗಳ ಬಗ್ಗೆ ನಾನು ಮಾತನಾಡುವುದಿಲ್ಲ. ನಮ್ಮ ವಕೀಲರು ಉತ್ತರಿಸುತ್ತಾರೆ ಎಂದರು.
ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖ ನಾಯಕರ ಅನುಪಸ್ಥಿತಿ ಬಗ್ಗೆ ಮಾಜಿ ಶಾಸಕ ಅಪ್ಪಾಜಿಗೌಡ ಸೇರಿದಂತೆ ಹಲವು ನಾಯಕರು ಬಂದಿದ್ದಾರೆ. ಇನ್ನು ಕೆಲವರು ಕೆಲಸದಲ್ಲಿ ನಿರತರಾಗಿರುವುದರಿಂದ ಬಂದಿಲ್ಲ ಎಂದು ಪ್ರತಿಕ್ರಿಯಿಸಿದರು.