ಕಣ್ಣಿನ ಕಾಯಿಲೆ ಬಗ್ಗೆ ಇರುವ ಮೂಢನಂಬಿಕೆ ಕೈಬಿಟ್ಟು ತಕ್ಷಣ ಚಿಕಿತ್ಸೆ ಪಡೆಯಿರಿ: ಆರೋಗ್ಯ ಇಲಾಖೆ ನಿರ್ದೇಶಕ ಡಾ. ಪುಷ್ಪರಾಜ್ ಸಲಹೆ

ಬೆಂಗಳೂರು, ಅ.11- ಶೇಕಡಾ 80 ರಷ್ಟು ಕಣ್ಣಿನ ಕಾಯಿಲೆಗಳನ್ನು ಗುಣಪಡಿಸಬಹುದು. ಜನರು ಕಣ್ಣಿನ ಕಾಯಿಲೆ ಬಗ್ಗೆ ಇರುವ ಮೂಢನಂಬಿಕೆ ಕೈಬಿಟ್ಟು ಸಮಸ್ಯೆ ಕಂಡ ತಕ್ಷಣ ಚಿಕಿತ್ಸೆ ಪಡೆದು ಗುಣಮುಖರಾಗಬೇಕು ಎಂದು ಆರೋಗ್ಯ ಇಲಾಖೆ ನಿರ್ದೇಶಕ ಡಾ. ಪುಷ್ಪರಾಜ್ ಸಲಹೆ ನೀಡಿದರು.

ಮಿಂಟೋ ಕಣ್ಣಾಸ್ಪತ್ರೆಯಲ್ಲಿ ವಿಶ್ವ ನೇತ್ರ ದೃಷ್ಟಿ ದಿನದ ಅಂಗವಾಗಿ ಜನ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದ ಅವರು, ಡಯಾಬಿಟಿಕ್ ರೆಟಿನೋಪಥಿ, ಗ್ಲೊಕೋಮಾ, ಮಕ್ಕಳ ದೃಷ್ಟಿ ಸಮಸ್ಯೆ ಹೀಗೆ ಕಣ್ಣಿನ ಎಲ್ಲ ಕಾಯಿಲೆಗಳಿಗೂ ಈಗ ಸರ್ಕಾರಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸೆಗಳಿವೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದು ಆರೋಗ್ಯವಂತರಾಗಿರಬೇಕು ಎಂದು ಹೇಳಿದರು.

ಮೊದಲು ಲಯನ್ಸ್ ಕ್ಲಬ್ ಮತ್ತಿತರ ಸಂಘ ಸಂಸ್ಥೆಗಳು ಕಣ್ಣಿನ ಕಾಯಿಲೆ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದವು. ಈಗ ಸರ್ಕಾರಿ ಆಸ್ಪತ್ರೆಗಳೂ ಈ ಕೆಲಸವನ್ನು ಹೆಚ್ಚು ಮುತುವರ್ಜಿಯಿಂದ ಮಾಡುತ್ತಿವೆ. ಮಿಂಟೋ ಕಣ್ಣಾಸ್ಪತ್ರೆಯಂತೂ ಈ ದಿಸೆಯಲ್ಲಿ ಅಗ್ರಗಣ್ಯ ಸ್ಥಳದಲ್ಲಿದೆ ಎಂದು ಪ್ರಶಂಸಿಸಿದರು.

ಕಣ್ಣಿನ ದಾನ ಶ್ರೇಷ್ಠ. ಪ್ರತಿಯೊಬ್ಬರೂ ಕಣ್ಣು ದಾನ ಮಾಡಬಹುದು. ಮತ್ತೊಬ್ಬರ ಬಾಳು ಬೆಳಗಲು ಇರುವ ಎಕೈಕ ದಾನ ಕಣ್ಣು ದಾನ. ಕಣ್ಣು ದಾನ ಮಾಡಲು ಜನ ಹೆಚ್ಚಿನ ರೀತಿಯಲ್ಲಿ ಮುಂದೆ ಬರಬೇಕು.ಕುಟುಂಬ ಕಲ್ಯಾಣ ಕಾರ್ಯಕ್ರಮದಂತೆ ಕಣ್ಣು ದಾನವೂ ಚಾಲ್ತಿಗೆ ಬರಬೇಕು. ಈ ಬಗ್ಗೆ ಯುವಕರು, ವಿದ್ಯಾರ್ಥಿಗಳು ಕಾರ್ಯೋನ್ಮುಖರಾಗಬೇಕು ಎಂದು ತಿಳಿಸಿದರು.

ಅಂಚೆ ವಿಶೇಷ ಲಕೋಟೆ ಬಿಡುಗಡೆ ಮಾಡಿ ಮಾತನಾಡಿದ ಇಂಡಿಯನ್ ಪೆÇೀಸ್ಟಲ್ ನಿರ್ದೇಶಕ ನಟರಾಜ್, ಅಂಚೆ ಇಲಾಖೆ 25 ನೇ ಸ್ಮರಣ ಸಂಚಿಕೆಯಾಗಿ ನೇತ್ರದಾನ ಶ್ರೇಷ್ಠ ದಾನ ಎಂದು ಸಾರಲು ಅಂಚೆ ವಿಶೇಷ ಲಕೋಟೆ ಬಿಡುಗಡೆ ಮಾಡಿದೆ ಎಂದರು.

ಮಿಂಟೋ ಕಣ್ಣಾಸ್ಪತ್ರೆ ನಿರ್ದೇಶಕಿ ಡಾ.ಸುಜಾತಾ ರಾಥೋಡ್ ಮಾತನಾಡಿ, ಕಣ್ಣಿನ ಕಾಯಿಲೆಗಳಿಗೆ ಬಡವರಿಗೂ ಉಚಿತವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿದೆ. ಕಣ್ಣನ ಕಾಯಿಲೆ ಅಲಕ್ಷ್ಯ ಮಾಡದೆ ಸಕಾಲಕ್ಕೆ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.

ಆರೋಗ್ಯ ಇಲಾಖೆ ಅಪರ ನಿರ್ದೇಶಕ ಡಾ.ಪಾಟೀಲ್ ಓಂಪ್ರಕಾಶ್, ನೇತ್ರಶಾಸ್ತ್ರ ವಿಭಾಗದ ಉಪ ನಿರ್ದೇಶಕ ಡಾ.ಬಿ.ಎಸ್.ಪಾಟೀಲ್, ಬೆಂಗಳೂರು ಮೆಡಿಕಲ್ ಕಾಲೇಜಿನ ನಿರ್ದೇಶಕ ಡಾ.ಎಚ್.ಎಸ್. ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

ನೂರಾರು ಸಂಖ್ಯೆಯ ವೈದ್ಯರು, ನೇತ್ರಾಧಿಕಾರಿಗಳು, ಶುಶ್ರೂಷಕರು, ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ