ಬೆಂಗಳೂರು, ಅ.11-ಪ್ರಸ್ತುತ ದೇಶದ ಪರಿಸ್ಥಿತಿಯಲ್ಲಿ ಪರ್ಯಾಯ ಶಕ್ತಿಯನ್ನು ರೂಪಿಸುವುದು ಕಷ್ಟವಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು.
ನಗರದ ಚಿತ್ರಕಲಾ ಪರಿಷತ್ ಆವರಣದಲ್ಲಿ ಬಯಲು ಪರಿಷತ್ ಭಾರತ ಯಾತ್ರಾ ಕೇಂದ್ರ ಆಯೋಜಿಸಿದ್ದ ಮಹಾತ್ಮಗಾಂಧೀಜಿ, ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ 150ನೇ ಜನ್ಮದಿನಾಚರಣೆ, ಇಂದಿನ ವ್ಯವಸ್ಥೆ- ಅವ್ಯವಸ್ಥೆ ಒಂದು ಅವಲೋಕನ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಡೀ ರಾಷ್ಟ್ರದಲ್ಲಿ ಅವ್ಯವಸ್ಥೆಗೆ ಪರಿಹಾರ ಹುಡುಕುವುದು ಸುಲಭವಲ್ಲ. ಕೈಲಾದಷ್ಟು ಮಾಡಬಹುದು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಆಡಳಿತ ವ್ಯವಸ್ಥೆಗೆ ಪರ್ಯಾಯ ಶಕ್ತಿಯನ್ನು ಜಯಪ್ರಕಾಶ್ ನಾರಾಯಣ್ ಅವರು ಕೊಡುಗೆಯಾಗಿ ಕೊಟ್ಟರು. ಅದು ಇಂದು ಬೃಹದಾಕಾರವಾಗಿ ಬೆಳೆದಿದೆ. ಅಂತಹ ಶಕ್ತಿಯನ್ನು ಎದುರಿಸುವಂತಹ ಪರ್ಯಾಯ ಶಕ್ತಿಯನ್ನು ಕರ್ನಾಟಕದಿಂದಲೇ ಪ್ರಾರಂಭಿಸಬೇಕಾದ ವಿಪರ್ಯಾಸ ಎದುರಾಗಿದೆ ಎಂದರು.
ಆ ಕಾರಣದಿಂದಲೇ ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚಿಸುವಾಗ ಯುವ ಸೇನೆಯಂತಹ ಪ್ರಾದೇಶಿಕ ಪಕ್ಷಗಳನ್ನು ಹೊರಗಿಟ್ಟು , ಸಮಾನ ನಿಲುವುಳ್ಳ ಹತ್ತು ಹಲವು ಪ್ರಾದೇಶಿಕ ಪಕ್ಷಗಳನ್ನು ಒಂದೇ ವೇದಿಕೆಗೆ ತಂದು ಕಾರ್ಯಕ್ರಮ ಮಾಡಲಾಯಿತು. ಆದರೂ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸುವುದು ಅಷ್ಟೊಂದು ಯಶಸ್ವಿ ಸಾಧ್ಯವಾಗಿಲ್ಲ. ಜೀವನದುದ್ದಕ್ಕೂ ಅವ್ಯವಸ್ಥೆಯನ್ನು ನೀಡಿದ್ದ ರಾಷ್ಟ್ರ-ರಾಜ್ಯ ರಾಜಕಾರಣವನ್ನು ನೋಡಿದ್ದೇನೆ ಎಂದರು.
ದೆಹಲಿಯಿಂದ ಹಳ್ಳಿಯವರೆಗೂ ಚುನಾವಣಾ ರಾಜಕಾರಣಕ್ಕೆ ಮಹತ್ವವಿದೆ. ಹೋರಾಟವಿಲ್ಲದೆ ಪಂಚಾಯ್ತಿ ಸದಸ್ಯನಾಗಲು ಸಾಧ್ಯವಿಲ್ಲ. ಇಂದಿನ ಅವ್ಯವಸ್ಥೆಯಿಂದ ಹೊರಬರುವುದು ತುಂಬಾ ಕಷ್ಟ. ಹಾಗೆಯೇ ವ್ಯವಸ್ಥೆ ಸರಿಪಡಿಸುವುದು ಕೂಡ ಅಷ್ಟೊಂದು ಸುಲಭವಲ್ಲ ಎಂದು ಗೌಡರು ತಿಳಿಸಿದರು.
ರಾಷ್ಟ್ರೀಯ ಪಕ್ಷಗಳ ನಡುವೆ ಪ್ರಾದೇಶಿಕ ಪಕ್ಷಗಳ ಸಮಸ್ಯೆ ಸಾಕಷ್ಟಿದ್ದು, ಅವುಗಳನ್ನು ದೂರ ಸರಿಸಿ ಒಂದುಗೂಡಿಸುವ ಹೋರಾಟದ ಮುಂಚೂಣಿಯಲ್ಲಿ ನಿಲ್ಲಬೇಕಾಗುತ್ತದೆ ಎಂದು ಹೇಳಿದರು.
ಪ್ರಾದೇಶಿಕ ಪಕ್ಷಗಳನ್ನು ಒಂದುಗೂಡಿಸಲು ಸಾಕಷ್ಟು ಶ್ರಮಿಸಬೇಕಿದೆ. ಎಲ್ಲರ ಗಮನ ಚುನಾವಣೆ ಕಡೆ ಇರುತ್ತದೆ. ನಮ್ಮದೇ ನೆಲದಲ್ಲಿ ಅಣೆಕಟ್ಟು ನಿರ್ಮಾಣ ಮಾಡಬಾರದು ಎನ್ನುತ್ತಾರೆ. ಇದು ಮುಂದಿನ ಪೀಳಿಗೆಗೆ ಕಷ್ಟವಾಗಲಿದೆ ಎಂದು ಮೇಕೆದಾಟು ಯೋಜನೆಯನ್ನು ಪ್ರಸ್ತಾಪಿಸದೆ ಹೇಳಿದರು.
ಮಹಾತ್ಮಗಾಂಧೀಜಿ ಅವರ ಕೊಡುಗೆಯನ್ನು ಮರೆಯುತ್ತಿದ್ದು ಅವರ ಸಂದೇಶವನ್ನು ಪ್ರತಿ ಹಳ್ಳಿ ಹಾಗೂ ಶಾಲೆಗೆ ತಲುಪಿಸಬೇಕಿದೆ ಎಂದು ಹೇಳಿದರು.
ಮಾಜಿ ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ, ಇಂದಿನಿಂದ ಒಂದು ವರ್ಷಗಳ ಕಾಲ ರಾಜ್ಯದಲ್ಲಿ ಗಾಂಧೀಜಿಯವರು ಭೇಟಿ ನೀಡಿದ ಸ್ಥಳಗಳಲ್ಲಿ ಜನಜಾಗೃತಿ ಮೂಡಿಸಿ ಯುವಕರಿಗೆ ಗಾಂಧೀಜಿ ತತ್ವಗಳನ್ನು ತಲುಪಿಸುವ ಉದ್ದೇಶದಿಂದ ಗಾಂಧಿ ಯಾನ ಆರಂಭಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿ ಅವರಿಗೆ ಜೆ.ಪಿ. ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಲಾವಿದ ಶಿವಾನಂದ ಬಸವ ತತ್ವಾರ್ ಅವರು ದೇವೇಗೌಡರ ಭಾವಚಿತ್ರ ಬಿಡಿಸಿ ಕೊಡುಗೆಯಾಗಿ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಭಾಪತಿ ಬಿ.ಎಲ್.ಶಂಕರ್, ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಮಾಜಿ ಶಾಸಕ ಬಿ.ಆರ್.ಪಾಟೀಲ್, ಮಾಜಿ ಸದಸ್ಯ ರಮೇಶ್ಬಾಬು, ನಾಗರಾಜಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.