ಬೆಂಗಳೂರು, ಅ.11- ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸ್ಪರ್ಧೆ ಸಂಬಂಧ ಕಾಂಗ್ರೆಸ್‍ನಲ್ಲಿ ಉದ್ಭವಿಸಿರುವ ಗೊಂದಲ ನಿವಾರಿಸಲು ಮುಂದಾಗಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಪಕ್ಷಕ್ಕಾಗುವ ಮುಜುಗರ ತಪ್ಪಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದೆ. ಎರಡೂ ಪಕ್ಷಗಳು ಒಟ್ಟಾಗಿ ಉಪ ಚುನಾವಣೆ ಎದುರಿಸಲು ನಿರ್ಧರಿಸಿವೆ. ಇದಕ್ಕೆ ರಾಜ್ಯ ನಾಯಕರ ಒಪ್ಪಿಗೆಯೂ ಇದೆ. ಆದರೆ ರಾಮನಗರದ ಸ್ಥಳೀಯ ನಾಯಕರು ಶತಾಯ ಗತಾಯ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲೇಬೇಕೆಂದು ಪಟ್ಟು ಹಿಡಿದಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಡಿ.ಕೆ.ಶಿವಕುಮಾರ್ ರಾಮನಗರ ಜಿಲ್ಲಾ ಮುಖಂಡರೊಂದಿಗೆ ಮಾತುಕತೆ ನಡೆಸಿದರು.
ಮುಂದಿನ ಚುನಾವಣೆವರೆಗೆ ಯಾವುದೇ ತೀರ್ಮಾನ ತೆಗೆದುಕೊಳ್ಳಬೇಡಿ. ಬಂಡಾಯವಾಗಿ ಸ್ಪರ್ಧಿಸಿದರೆ ಪಕ್ಷಕ್ಕೆ ಮುಜುಗರವಾಗಲಿದೆ ಎಂದು ಮುಖಂಡರಿಗೆ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗರಾಜು ಪುತ್ರ ಚಂದ್ರಶೇಖರ್ ಅವರನ್ನು ಬಿಜೆಪಿ ಕಣಕ್ಕಿಳಿಸಲು ನಿರ್ಧರಿಸಿದೆ. ಆದರೆ ಡಿ.ಕೆ.ಶಿವಕುಮಾರ್ ಚಂದ್ರಶೇಖರ್‍ಗೆ ದೂರವಾಣಿ ಕರೆ ಮಾಡಿ ಇಷ್ಟು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಇದ್ದೀರಿ. ಈಗ ನಿಮ್ಮ ತಂದೆಯ ಮಾತನ್ನು ಧಿಕ್ಕರಿಸಿ ಬಿಜೆಪಿಗೆ ಹೋಗಿದ್ದೀರಿ . ರಾಮನಗರದಿಂದ ಕಣಕ್ಕಿಳಿಯುವುದು ಬೇಡ ಎಂದು ಮನವರಿಕೆ ಮಾಡಿದ್ದಾರೆ. ಹಾಗಾಗಿ ಚಂದ್ರಶೇಖರ್ ಸ್ಪರ್ಧಿಸಲು ಹಿಂದೇಟು ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಇಕ್ಬಾಲ್ ಹುಸೇನ್ ಬಂಡಾಯವಾಗಿಯಾದರೂ ಸ್ಪರ್ಧಿಸಬೇಕೆಂದು ಪಟ್ಟು ಹಿಡಿದಿದ್ದು , ಸಿ.ಎಂ.ಲಿಂಗಪ್ಪ ಅವರ ಬೆಂಬಲವೂ ಇದ್ದು ಡಿ.ಕೆ.ಶಿವಕುಮಾರ್ ಎಲ್ಲರ ಮನವೊಲಿಕೆ ಯತ್ನ ಮಾಡಿದ್ದಾರೆ.