ಬೆಂಗಳೂರು, ಅ.11- ಅಂತೂ ಇಂತು ಕೊನೆಗೂ ಬಿಜೆಪಿ ಸಕ್ಕರೆ ಜಿಲ್ಲೆ ಮಂಡ್ಯ ಲೋಕಸಭೆ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ.
ವಾಣಿಜ್ಯ ಇಲಾಖೆಯ ನಿವೃತ್ತ ಅಧಿಕಾರಿ ಡಾ.ಸಿದ್ದರಾಮಯ್ಯ ಅವರು ಮಂಡ್ಯ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಡಾ.ಸಿದ್ದರಾಮಯ್ಯ ಹಾಗೂ ಕೆಲವು ಮುಖಂಡರು ಪಕ್ಷಕ್ಕೆ ಸೇರ್ಪಡೆಯಾದರು.
ಸಿದ್ದರಾಮಯ್ಯ ಅವರೇ ಮುಂಬರುವ ಮಂಡ್ಯ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಅಧಿಕೃತ ಅಭ್ಯರ್ಥಿಯೇ ಅವರಾಗಲಿದ್ದು, ಪಕ್ಷದ ಚುನಾವಣಾ ಸಮಿತಿಗೆ ಅವರ ಹೆಸರನ್ನು ಕಳುಹಿಸಿಕೊಡಲಾಗುವುದು. ಕಾರ್ಯಕರ್ತರೆಲ್ಲರೂ ಒಗ್ಗೂಡಿ ಚುನಾವಣೆಯಲ್ಲಿ ಗೆಲುವಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಮುಂದುವರೆದ ರಾಮನಗರ ಗೊಂದಲ:
ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲೂ ಈಗಾಗಲೇ ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಅವರ ಪುತ್ರ ಚಂದ್ರಶೇಖರ್ ಪಕ್ಷಕ್ಕೆ ಬಂದಿದ್ದರೂ ಅವರಿಗೆ ಟಿಕೆಟ್ ಖಾತರಿ ಮಾಡಿಲ್ಲ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಸಲು ಜೆಡಿಎಸ್ ತೀರ್ಮಾನಿಸಿದೆ. ಹೀಗಾಗಿ ತೆನೆ ಹೊತ್ತ ಮಹಿಳೆ ಮುಂದೆ ಅಲ್ಪಸ್ವಲ್ಪವಾದರೂ ಸ್ಪರ್ಧೆ ನೀಡುವಂತಹ ಅಭ್ಯರ್ಥಿಯ ಹುಡುಕಾಟದಲ್ಲಿ ಬಿಜೆಪಿ ಕಾಲ ಕಳೆಯುತ್ತಿದೆ.
ಸ್ಥಳೀಯ ಮುಖಂಡರಾದ ರುದ್ರೇಶ್, ವೇಣುಗೋಪಾಲ್, ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಅಭ್ಯರ್ಥಿಯಾಗಬಹುದೆಂದು ನಿರೀಕ್ಷಿಸಲಾಗಿತ್ತಾದರೂ ದೋಸ್ತಿ ಪಕ್ಷಗಳಲ್ಲಿನ ಅಸಮಾಧಾನದಂತಹ ಬೆಳವಣಿಗೆ ಬಿಜೆಪಿಗೆ ಒಂದಿಷ್ಟು ಹುರುಪು ತಂದಿದೆ. ಕಾರಣ ಜೆಡಿಎಸ್ ವಿರುದ್ಧ ನನಗೆ ಟಿಕೆಟ್ ಸಿಗದೇ ಇದ್ದರೂ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಕಾಂಗ್ರೆಸ್ ಮುಖಂಡ ಇಕ್ಬಾಲ್ ಹುಸೇನ್ ಘೋಷಿಸಿರುವುದು ಕಮಲ ಕಿಲಕಿಲ ಎನ್ನುವಂತಾಗಿದೆ.
ಒಂದು ವೇಳೆ ಇಕ್ಬಾಲ್ ಹುಸೇನ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಬಿಜೆಪಿ ಅವರಿಗೆ ಬೆಂಬಲ ನೀಡುವ ಮೂಲಕ ಜೆಡಿಎಸ್ಗೆ ಟಾಂಗ್ ನೀಡಲು ಮುಂದಾಗಿದೆ.
ಜಮಖಂಡಿ ವಿಧಾನಸಭೆ ಕ್ಷೇತ್ರದಲ್ಲಿ ಈಗಾಗಲೇ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಶ್ರೀಕಾಂತ್ ಕುಲಕರ್ಣಿಯನ್ನು ಘೋಷಣೆ ಮಾಡಲಾಗಿದೆ. ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಮತ್ತೊಬ್ಬ ಆಕಾಂಕ್ಷಿ ಬಿ.ಎಸ್.ಸಿಂಧನೂರ ಬಂಡಾಯ ಏಳುವ ಮುನ್ಸೂಚನೆ ನೀಡಿದ್ದಾರೆ. ಇದು ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಹೀಗಾಗಿ ಸ್ಥಳೀಯ ಮುಖಂಡರಾದ ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ, ಜಗದೀಶ್ ಶೆಟ್ಟರ್, ಸಂಸದ ಪಿ.ಸಿ.ಗದ್ದಿಗೌಡರ್ ಮತ್ತಿತರರು ಸಿಂಧನೂರ ಅವರನ್ನು ಮನವೊಲಿಸುವ ಕಸರತ್ತಿಗೆ ಕೈ ಹಾಕಿದ್ದಾರೆ.
ಖುದ್ದು ಯಡಿಯೂರಪ್ಪನವರು ಕೂಡ ಸಿಂಧನೂರ ಅವರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಬಂಡಾಯ ಏಳಬಾರದು. ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವ ಆಶ್ವಾಸನೆ ನೀಡಿದ್ದಾರೆ.