ಬಳ್ಳಾರಿ: ಲೋಕಸಭಾ ಉಪಚುನಾವಣೆಯ ಬಳ್ಳಾರಿ ಅಭ್ಯರ್ಥಿ ಆಯ್ಕೆಗಾಗಿ ಕಾಂಗ್ರೆಸ್ಸಿನಲ್ಲಿ ಗೊಂದಲ ಉಂಟಾಗಿದೆ. ಈ ವಿಚಾರವಾಗಿ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ರಮೇಶ್ ಜಾರಕಿಹೊಳಿ ನಡುವೆ ಮತ್ತೆ ಪೈಪೋಟಿ ನಡೆಯಲಿದೆ.
ಕಾಂಗ್ರೆಸ್ಸಿನ ಭದ್ರಕೋಟೆ ಬಳ್ಳಾರಿ. ಆದರೆ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ಸಿಗದಿರುವುದು ಕಾರ್ಯಕರ್ತರು ಹಾಗೂ ಸ್ಥಳೀಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಇತ್ತ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಜಾರಕಿಹೊಳಿ ಸಹೋದರರ ನಡುವಿನ ವಾಗ್ದಾಳಿ, ಬಳ್ಳಾರಿ ಅಭ್ಯರ್ಥಿಯ ಆಯ್ಕೆ ವಿಚಾರದ ಮೇಲೆ ಪರಿಣಾಮ ಬೀರಿದೆ. ಬಳ್ಳಾರಿ ಶಾಸಕರ ಬೆಂಬಲಕ್ಕೆ ನಿಂತಿದ್ದ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ನಾಲ್ವರು ಶಾಸಕರು ಸ್ವಾಮಿನಿಷ್ಠೆ ತೋರುತ್ತಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಅವರು ಕಳೆದ 2 ದಿನಗಳಿಂದ ಅಭ್ಯರ್ಥಿ ಆಯ್ಕೆಗೆ ಸಭೆ ಕರೆದಿದ್ದರೂ, ಶಾಸಕರಾದ ಜೆ.ಎನ್ ಗಣೇಶ, ಪರಮೇಶ್ವರ್ ನಾಯ್ಕ್, ಆನಂದಸಿಂಗ್, ಭೀಮಾನಾಯ್ಕ್ ಗೈರು ಹಾಜರಾಗುತ್ತಿದ್ದಾರೆ. ಒಟ್ಟು ನಾಲ್ಕು ಸಭೆ ಕರೆದರೂ ಅಭ್ಯರ್ಥಿಯ ಆಯ್ಕೆ ವಿಫಲವಾಗಿದೆ. ಇಂದು ಕೂಡ ಸಭೆ ನಡೆಯಲಿದ್ದು, ಅಭ್ಯರ್ಥಿ ಆಯ್ಕೆ ಅಂತಿಮವಾಗುವ ಯಾವುದೇ ಲಕ್ಷಣ ಕಾಣ್ತಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇತ್ತ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ ಅವರು ಬಳ್ಳಾರಿ ರಾಜಕೀಯದಲ್ಲಿ ಕೈಹಾಕುತ್ತಿದ್ದಾರೆ. ಹೀಗಾಗಿ ತಮ್ಮ ಆಪ್ತ ಶಾಸಕ ನಾಗೇಂದ್ರ ಅವರ ಸಹೋದರರಿಗೆ ಟಿಕೆಟ್ ಕೊಡಿಸಲು ಮುಂದಾಗಿದ್ದಾರಂತೆ. ಬಳ್ಳಾರಿಯಲ್ಲಿ ಕಾಂಗ್ರೆಸ್ಸಿನ ಒಟ್ಟು 6 ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರು, ಹಾಗೂ ಒಬ್ಬರು ರಾಜ್ಯಸಭಾ ಸದಸ್ಯರು ಇದ್ದಾರೆ. ಇವರಲ್ಲಿ ನಾಲ್ವರು ಸಭೆಗೆ ಗೈರಾಗುತ್ತಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.