ರಾಮನಗರದಲ್ಲಿ ಅನಿತಾ ಸ್ಪರ್ಧೆಗೆ ಎಚ್‍ಡಿ ದೇವೇಗೌಡರ ಗ್ರೀನ್‍ಸಿಗ್ನಲ್

ಬೆಂಗಳೂರು: ಉಪ ಚುನಾವಣಾ ಕಣ ರಂಗೇರ್ತಿದೆ. ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಬಿಕ್ಕಟ್ಟು ಗೊಂದಲ ಶಮನಗೊಂಡಿದ್ದು ಅನಿತಾ ಕುಮಾರಸ್ವಾಮಿ ಸ್ಪರ್ಧೆಗೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಗ್ರೀನ್‍ಸಿಗ್ನಲ್ ನೀಡಿದ್ದಾರೆ.

ದೇವೇಗೌಡರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅನಿತಾ ಕುಮಾರಸ್ವಾಮಿ ಅಭ್ಯರ್ಥಿಯಾಗಿ ಆಯ್ಕೆಯಾಗಲು ಕಾರ್ಯಕರ್ತರು ಸರ್ವಾನುಮತದ ಒಪ್ಪಿಗೆ ನೀಡಿದ್ದಾರೆ. ಜೆಡಿಎಸ್ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಅನಿತಾ ಅವರು ಸೋಮವಾರ ಬೆಳಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ.

ರಾಮನಗರದಲ್ಲಿ ಆಪರೇಷನ್ ಕಮಲ ಮಾಡುವಲ್ಲಿ ಯಶಸ್ವಿಯಾಗಿದ್ದ ಬಿಜೆಪಿ ಚಿತ್ತ ಈಗ ಮಂಡ್ಯದತ್ತ ನೆಟ್ಟಿದೆ. ಮಂಡ್ಯದ ಹಲವು ಜೆಡಿಎಸ್, ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರಲಿದ್ದು, ಇಂದು ಆರ್. ಅಶೋಕ್ ನೇತೃತ್ವದಲ್ಲಿ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಯಲಿದೆ.

ಸಭೆಯಲ್ಲಿ ಮಂಡ್ಯದಲ್ಲಿ ಆಪರೇಷನ್ ಕಮಲ ಮುಂದುವರಿಸಲು ಬಿಎಸ್‍ವೈ ಗ್ರೀನ್‍ಸಿಗ್ನಲ್ ನೀಡುವ ಸಾಧ್ಯತೆ ಇದೆ. ಈ ಜವಾಬ್ದಾರಿಯನ್ನು ಅಶೋಕ್ ಹಾಗೂ ಯೋಗೇಶ್ವರ್‍ಗೆ ನೀಡಲಿದ್ದಾರೆ. ಇತ್ತ ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕೂಡ ಕಗ್ಗಂಟಾಗೆ ಉಳಿದಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿಕೆಶಿ ಅವರ ಕೈಯಲ್ಲೇ ಅಭ್ಯರ್ಥಿ ಆಯ್ಕೆ ಮಾಡಲಾಗ್ತಿಲ್ಲ. ಹೀಗಾಗಿ ಇಂದು ಕೂಡ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಯಡಿಯೂರಪ್ಪ, ಶ್ರೀರಾಮುಲು, ಪುಟ್ಟರಾಜು ಅವರಿಂದ ತೆರವಾಗಿರುವ ಶಿವಮೊಗ್ಗ, ಬಳ್ಳಾರಿ, ಮಂಡ್ಯ ಕ್ಷೇತ್ರದ ಉಪಚುನಾವಣೆ ನವೆಂಬರ್ 3 ರಂದು ನಡೆಯಲಿದ್ದು, ನವೆಂಬರ್ 6 ರಂದು ಫಲಿತಾಂಶ ಪ್ರಕಟವಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ