2017-18ರ ಸಾಲಿನಲ್ಲಿ ದಾಖಲೆ ಪ್ರಮಾಣದ ಆದಾಯ ಸಂಗ್ರಹಿಸಿದ ರಾಜ್ಯ ಸಾರಿಗೆ ಇಲಾಖೆ

ಬೆಂಗಳೂರು,ಅ.9- ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು 2017-18ರ ಸಾಲಿನಲ್ಲಿ ದಾಖಲೆ ಪ್ರಮಾಣದ ಆದಾಯ ಸಂಗ್ರಹಿಸಿ ಇತಿಹಾಸ ಸೃಷ್ಟಿಸಿದೆ.
ಹೌದು, 2017-18 ರ ಸಾಲಿನಲ್ಲಿ ಸಾರಿಗೆ ಇಲಾಖೆಯು ಒಟ್ಟಾರೆ 5,954 ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸುವ ಮೂಲಕ ವಾರ್ಷಿಕ ಗುರಿಗಿಂತ ಶೇ.7ರಷ್ಟು ಹೆಚ್ಚಿನ ಆದಾಯವನ್ನು ಸಂಗ್ರಹಿಸಿ ದಾಖಲೆ ನಿರ್ಮಿಸಿದೆ.

ಸಾರಿಗೆ ಇಲಾಖೆಯು ವರ್ಷದಿಂದ ವರ್ಷಕ್ಕೆ ನಿಗದಿತ ಆದಾಯದ ಗುರಿಯನ್ನು ಹಾಕಿಕೊಳ್ಳುತ್ತದೆ. 2017-18ನೇ ಸಾಲಿನಲ್ಲಿ ಒಟ್ಟಾರೆ 5,515.6 ಕೋಟಿ ರೂಪಾಯಿಯನ್ನು ಸಂಗ್ರಹಿಸುವ ಗುರಿಯನ್ನು ಹಾಕಿಕೊಂಡಿತ್ತು. ಆದರೆ ಈ ಗುರಿಯನ್ನು ದಾಟಿ ಬರೋಬ್ಬರಿ 5,954 ಕೋಟಿ ರೂಪಾಯಿ ಸಂಗ್ರಹಿಸಿದೆ. ಈ ಮೊದಲು 2016-17 ನೇ ಸಾಲಿನಲ್ಲಿ 5,262.4 ಕೋಟಿ ರೂಪಾಯಿಯನ್ನು ಸಂಗ್ರಹಿಸಿತ್ತು, ಆ ವರ್ಷ 5,026 ಕೋಟಿ ರೂಪಾಯಿ ಗುರಿಯನ್ನು ಹಾಕಿಕೊಂಡಿತ್ತು.

ಯಾವ ವರ್ಷ ಎಷ್ಟು ಆದಾಯ?
2009-10 ನೇ ಸಾಲಿನಲ್ಲಿ 1,892 ಕೋಟಿ ರೂಪಾಯಿ, 2010-11 ರಲ್ಲಿ 2,511 ಕೋಟಿ ರೂಪಾಯಿ, 2011-12ರಲ್ಲಿ 2,985 ಕೋಟಿ, 2012-13ರಲ್ಲಿ 3,566 ಕೋಟಿ, 2013-14 ರಲ್ಲಿ 3,671 ಕೋಟಿ, 2014-15ರಲ್ಲಿ 4,145 ಕೋಟಿ, 2015-16ರಲ್ಲಿ 4,608 ಕೋಟಿ, 2016-17ರಲ್ಲಿ 5,262 ಕೋಟಿ, 2017-18ರಲ್ಲಿ 5,954 ಕೋಟಿ ರೂಪಾಯಿ ಆದಾಯ ಗಳಿಸಿದೆ.

ಸಾರಿಗೆ ಇಲಾಖೆಯು ರಸ್ತೆ ತೆರಿಗೆ, ಹೊಸ ವಾಹನಗಳ ನೋಂದಣಿ ಶುಲ್ಕ, ಪರವಾನಿಗೆ ಶುಲ್ಕ, ಬಾಕಿ ಇರುವ ತೆರಿಗೆ ವಸೂಲಿ, ಚಾಲನಾ ಪರವಾನಿಗೆ ಶುಲ್ಕ, ವಾಹನಗಳ ಪರಿಶೀಲನೆ ಹಾಗೂ ರಾಜ್ಯಗಡಿಗಳಲ್ಲಿ ಚೆಕ್‍ಪೆÇೀಸ್ಟ್ ಮೂಲಕ ಒಟ್ಟಾರೆ ಆದಾಯವನ್ನು ಗಳಿಸುತ್ತಿದೆ. ವಿಶೇಷವೇನೆಂದರೆ ರಾಜ್ಯದ ಎಲ್ಲಾ ಜಿಲ್ಲೆಗಳಿಗಿಂತ ಬೆಂಗಳೂರು ನಗರ ಈ ಬಾರಿ ಅತಿಹೆಚ್ಚು ಆದಾಯವನ್ನು ತಂದುಕೊಟ್ಟಿದೆ. ಮಾಹಿತಿಗಳ ಪ್ರಕಾರ ರಾಜಧಾನಿಯಲ್ಲಿ ಒಟ್ಟು 76 ಲಕ್ಷ ವಾಹನಗಳು ನೋಂದಣಿಯಾಗುವ ಮೂಲಕ ಆದಾಯ ಹೆಚ್ಚಿದೆ.

ಕರ್ನಾಟಕ ಸರ್ಕಾರಕ್ಕೆ ಸಾರಿಗೆ ಇಲಾಖೆಯು ನಾಲ್ಕನೇ ಅತಿದೊಡ್ಡ ಆದಾಯ ನೀಡುವ ಸಂಸ್ಥೆಯಾಗಿದೆ. ಇದಲ್ಲದೇ ವಾಣಿಜ್ಯ ತೆರಿಗೆ ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹಾಗೂ ಅಬಕಾರಿ ಇಲಾಖೆಗಳು ಸರ್ಕಾರದ ಆದಾಯದ ಪ್ರಮುಖ ಮೂಲಗಳಾಗಿವೆ. ಕಳೆದ 9 ವರ್ಷಗಳಿಂದಲೂ ಸಾರಿಗೆ ಇಲಾಖೆ ವರ್ಷದಿಂದ ವರ್ಷಕ್ಕೆ ತನ್ನ ಆದಾಯವನ್ನು ಹೆಚ್ಚಿಸಿಕೊಂಡೇ ಬರುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ