ಬೆಂಗಳೂರು,ಅ.9- ಹಲವರ ವಿರೋಧ ವಾಗ್ವಾದ, ಗೊಂದಲ, ಪರಸ್ಪರ ಆರೋಪ-ಪ್ರತ್ಯಾರೋಪಗಳ ನಡುವೆಯೇ ನ.3ರಂದು ನಡೆಯುವ ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಜೆಡಿಎಸ್ ಅರ್ಭರ್ಥಿಯಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಘೋಷಣೆ ಮಾಡಲಾಗಿದೆ.
ರಾಮನಗರದಲ್ಲಿ ಇಂದು ನಡೆದ ಜಿಲ್ಲಾ ಜೆಡಿಎಸ್ ಮುಖಂಡರ ಸಭೆಯಲ್ಲಿ ಅನಿತಾ ಕುಮಾರಸ್ವಾಮಿ ಅವರನ್ನೇ ಅಧಿಕೃತ ಅಭ್ಯರ್ಥಿ ಎಂದು ಘೋಷಣೆ ಮಾಡಲಾಯಿತು.
ಗುರುವಾರ ಬೆಳಗ್ಗೆ 11 ಗಂಟೆಗೆ ರಾಮನಗರದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಜಿಲ್ಲಾ ಕಚೇರಿಗೆ ತೆರಳಿ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಪಕ್ಷದ ಅಭ್ಯರ್ಥಿಯಾಗಿ ಅನಿತಾಕುಮಾರಸ್ವಾಮಿ ನಾಮಪತ್ರ ಸಲ್ಲಿಸಲಿದ್ದಾರೆ.
ಇಂದು ನಡೆದ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರೇ ಅಧಿಕೃತವಾಗಿ ಘೋಷಣೆ ಮಾಡುವವರೆಗೂ ಅಭ್ಯರ್ಥಿ ಹೆಸರನ್ನು ಬಹಿರಂಗಪಡಿಸಬಾರದೆಂದು ಕೆಲವರು ಒತ್ತಾಯಿಸಿದರು.
ಈ ಹಂತದಲ್ಲಿ ಕಾರ್ಯಕರ್ತರ ನಡುವೆ ವಾಗ್ವಾದ, ಗೊಂದಲ, ಪರಸ್ಪರ ಆರೋಪ, ಪ್ರತ್ಯಾರೋಪ ಉಂಟಾಯಿತು. ಅಂತಿಮವಾಗಿ ಅನಿತಾ ಕುಮಾರಸ್ವಾಮಿ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡುವಂತೆ ವರಿಷ್ಠರ ಮೇಲೆ ಒತ್ತಡ ಹಾಕಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಸ್ಪರ್ಧಿಸಿ ಎರಡೂ ಕ್ಷೇತ್ರಗಳಲ್ಲಿ ಗೆದ್ದಿದ್ದರು. ಮುಖ್ಯಮಂತ್ರಿಯಾದ ನಂತರ ಚನ್ನಪಟ್ಟಣವನ್ನು ಉಳಿಸಿಕೊಂಡು ರಾಮನಗರ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.
ಇದೀಗ ತೆರವಾಗಿರುವ ಸ್ಥಾನಕ್ಕೆ ನ.3ರಂದು ಮತದಾನ ನಡೆದು ನ.6ರಂದು ಮತಗಳ ಎಣಿಕೆ ನಡೆಯಲಿದೆ. ಕುಮಾರಸ್ವಾಮಿ ಅವರ ರಾಜಕೀಯ ಕರ್ಮಭೂಮಿ ರಾಮನಗರವಾಗಿರುವುದರಿಂದ ಸಹಜವಾಗಿ ಈ ಉಪಚುನಾವಣೆ ರಾಜ್ಯವಲ್ಲದೆ ರಾಷ್ಟ್ರದ ಗಮನ ಸೆಳೆದಿದೆ.