ಬೆಂಗಳೂರು, ಅ.8- ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು, ಸಂಘಟನಾತ್ಮಕವಾಗಿ ಹೋರಾಟ ಮಾಡಬೇಕಾಗಿರುವ ಕಾಂಗ್ರೆಸ್ನಲ್ಲೀಗ ಗುಂಪುಗಾರಿಕೆ ತೀವ್ರಗೊಂಡಿದೆ.
ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಶಾಸಕರು ಒಂದೆಡೆ ಭಿನ್ನಮತೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸರ್ಕಾರಕ್ಕೆ ಮುಜುಗರ ತರುತ್ತಿದ್ದರೆ. ಇತ್ತ ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನಡುವೆ ಮುಸುಕಿನ ಗುದ್ದಾಟ ತೀವ್ರವಾಗಿದೆ.
ಇತ್ತೀಚಿನ ದಿನಗಳಲ್ಲಿ ದಿನೇಶ್ಗುಂಡೂರಾವ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಗುರುತಿಸಿಕೊಂಡಿದ್ದಾರೆ. ಉಪಮುಖ್ಯಮಂತ್ರಿ ಪರಮೇಶ್ವರ್, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಕೆಲವು ಸಚಿವರು ಮತ್ತೊಂದು ಕಡೆ ರಾಜಕಾರಣ ಮಾಡುತ್ತಿದ್ದಾರೆ.
ದಿನೇಶ್ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾದ ನಂತರ ಪರಮೇಶ್ವರ್ ಪಕ್ಷದ ಕಚೇರಿಗೆ ಭೇಟಿ ನೀಡುವುದನ್ನೇ ನಿಲ್ಲಿಸಿದ್ದಾರೆ. ಯಾವುದೇ ಪ್ರಮುಖ ವಿಷಯಗಳ ಚರ್ಚೆಯಾಗಬೇಕಾದರೂ ಸಿದ್ದರಾಮಯ್ಯ ಅವರ ಮನೆಯಲ್ಲೇ ಎಲ್ಲರೂ ಸೇರಿಕೊಳ್ಳುವುದು ಮಾಮೂಲಿಯಾಗಿದೆ.
ಕೆ.ಸಿ.ವೇಣುಗೋಪಾಲ್ ಅವರು ಬೆಂಗಳೂರಿಗೆ ಆಗಮಿಸಿ ಜಿಲ್ಲಾ ಕಾಂಗ್ರೆಸ್ ಮುಖಂಡರ ಸಭೆ ಕರೆದಾಗಲೂ ಮೊದಲ ದಿನ ಪರಮೇಶ್ವರ್ ಗೈರಾಗಿದ್ದರು. ಎರಡನೇ ದಿನ ಖುದ್ದಾಗಿ ವೇಣುಗೋಪಾಲ್ ಅವರೇ ಕರೆ ಮಾಡಿ ಪಕ್ಷದ ಕಚೇರಿಗೆ ಆಗಮಿಸುವಂತೆ ಸೂಚಿಸಿದಾಗ ಅನಿವಾರ್ಯವಾಗಿ ಪರಮೇಶ್ವರ್ ಸಭೆಯಲ್ಲಿ ಭಾಗವಹಿಸಿದ್ದರು.
ಇತ್ತೀಚೆಗೆ ನಡೆದ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಪರಮೇಶ್ವರ್ ಅವರು ದಿನೇಶ್ಗುಂಡೂರಾವ್ ಜತೆ ಹೆಚ್ಚಾಗಿ ಸಮಲೋಚನೆ ನಡೆಸಲಿಲ್ಲ. ಬೆಂಗಳೂರಿನ ಪ್ರಮುಖ ಶಾಸಕರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್ ಅವರ ಜತೆಯಲ್ಲಿ ಚರ್ಚೆ ಮಾಡಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದರು.
ಪರಮೇಶ್ವರ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡದೆ ಇರುವುದು, ದಿನೇಶ್ಗುಂಡೂರಾವ್ ಅವರಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಪರಮೇಶ್ವರ್ ಅವರನ್ನು ಆಗಮಿಸದೆ ಇರುವುದು ಸಾಮಾನ್ಯವೆಂಬತಾಗಿದೆ.
ಈ ಹಿಂದೆ ಪರಮೇಶ್ವರ್ 8 ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಅದರಲ್ಲಿ ಐದು ವರ್ಷಗಳ ಕಾಲ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ಥಿತ್ವದಲ್ಲಿತ್ತು.
ಆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರು ಮತ್ತು ಮುಖ್ಯಮಂತ್ರಿ ನಡುವೆ ಶೀಥಲ ಸಮರಗಳು ನಡೆಯುತ್ತಿದ್ದಾಗಲೂ ಅದು ಕಾಲ ಕಾಲಕ್ಕೆ ತಿಳಿಗೊಳ್ಳುತ್ತಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲವು ಸಂಗತಿಗಳನ್ನು ನಿರ್ಲಕ್ಷಿಸಿ ಪಕ್ಷದ ವಿಷಯ ಬಂದಾಗ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ತಮ್ಮನ್ನು ತಾವು ತೊಡಿಗಿಸಿಕೊಳ್ಳುತ್ತಿದ್ದರು.
ಈಗ ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿದ್ದಾರೆ. ದಿನೇಶ್ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಇಬ್ಬರ ನಡುವೆ ಅಘೋಷಿತ ಪೈಪೆÇೀಟಿ ಚಾಲ್ತಿಯಲ್ಲಿದೆ.
ಪರಮೇಶ್ವರ್ ಅವರು ಅಧ್ಯಕ್ಷರಾಗಿದ್ದಾಗ ನೇಮಿಸಿದ್ದ ಕಾಂಗ್ರೆಸ್ನ ಜಿಲ್ಲಾಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ದಿನೇಶ್ಗುಂಡೂರಾವ್ ಬದಲಾವಣೆ ಮಾಡಲು ಮುಂದಾಗಿರುವುದು ಇಬ್ಬರ ನಡುವಿನ ಶೀತಲ ಸಮರಕ್ಕೆ ಮತ್ತೊಂದು ಕಾರಣವಾಗಿದೆ.
ಒಟ್ಟಿನಲ್ಲಿ ಚುನಾವಣೆ ಕಾಲದಲ್ಲಿ ವಿರೋಧ ಪಕ್ಷಗಳ ವಿರುದ್ಧ ಕತ್ತಿ ಮಸೆಯಬೇಕಾದ ನಾಯಕರಿಗೂ ತಮ್ಮ ತಮ್ಮಲ್ಲೇ ಜಿದ್ದಿಗೆ ಬಿದ್ದಿರುವುದು ಪಕ್ಷದ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಪೈಪೆÇೀಟಿ ನಾಯಕರ ಮಟ್ಟದಲ್ಲಷ್ಟೇ ಅಲ್ಲದೆ ಕೆಳಹಂತದ ಕಾರ್ಯಕರ್ತರಲ್ಲೂ ಅಪಾರವಾಗಿ ಕಂಡುಬರುತ್ತಿರುವುದು ಪಕ್ಷದ ಸಂಘಟನೆ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತಿದೆ.