ಲೈಂಗಿಕ ಅಲ್ಪಸಂಖ್ಯಾತರನ್ನು ಸಮಾಜ ನೋಡುವ ದೃಷ್ಟಿಕೋನ ಬದಲಾಗಬೇಕು: ರೋಟರಿಯನ್ ಎಎಸ್‍ಎನ್ ಹೆಬ್ಬಾರ್

Varta Mitra News

ಬೆಂಗಳೂರು, ಅ.8- ಲೈಂಗಿಕ ಅಲ್ಪಸಂಖ್ಯಾತರನ್ನು ಸಮಾಜ ನೋಡುವ ದೃಷ್ಟಿಕೋನ ಬದಲಾಗಬೇಕಿದೆ ಎಂದು ರೋಟರಿಯನ್ ಎಎಸ್‍ಎನ್ ಹೆಬ್ಬಾರ್ ತಿಳಿಸಿದ್ದಾರೆ.

ರಾಜಾಜಿನಗರದ ರೋಬಾನೋ ಸೆಂಟರ್‍ನಲ್ಲಿ ರೋಟರಿ ಕ್ಲಬï ಆಯೋಜಿಸಿದ್ದ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಡಾ. ಅಕ್ಕೈ ಪದ್ಮಾಶಾಲಿಯವರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಸಮಾಜ ಮಂಗಳಮುಖಿಯರ ಬಗ್ಗೆ ಆಧುನಿಕ ಕಾಲದಲ್ಲೂ ಮಡಿವಂತಿಕೆ, ಅನಾದರ ತೋರುತ್ತಿದೆ ಇದು ಸರಿಯಲ್ಲ ಎಂದು ತಿಳಿಸಿದರು. ಮನುಷ್ಯರೆಲ್ಲರೂ ಒಂದೇ ಎಂಬ ಹೃದಯ ವೈಶಾಲ್ಯತೆ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.

ರೋಟರಿಯನ್ ನಂದಿನಿ ಜಗನ್ನಾಥ್ ಮಾತನಾಡಿ, ಲೈಂಗಿಕ ಅಲ್ಪಸಂಖ್ಯಾತರಲ್ಲೂ ಅಸಂಖ್ಯ ಪ್ರತಿಭಾನ್ವಿತರಿದ್ದರು, ಸಮಾಜದ ಕಟ್ಟುಪಾಡುಗಳಿಂದ ಶೋಷಣೆಗೆ ಒಳಗಾಗುತ್ತಿರುವುದು ಬೇಸರದ ಸಂಗತಿ ಎಂದು ಅಸಮಾಧಾನ ಹೊರಹಾಕಿದರು. ಮಂಗಳಮುಖಿಯರನ್ನು, ಸಮಾಜದ ಮುಖ್ಯವಾಹಿನಿಗೆ ಕರೆತರುವ ಸದುದ್ದೇಶದಿಂದ ಮೊದಲ ಹೆಜ್ಜೆಯಾಗಿ ಲೈಂಗಿಕ ಅಲ್ಪಸಂಖ್ಯಾತರು ಮತ್ತು ಮಂಗಳಮುಖಿಯರ ಹಕ್ಕುಗಳು ಹಾಗೂ ಈ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿರುವ ಅಪರೂಪದ ಸಾಧಕಿ ಡಾ. ಅಕ್ಕೈ ಪದ್ಮಶಾಲಿ ಅವರನ್ನು ಸನ್ಮಾನಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಹೋರಾಟಗಾರ್ತಿ ಡಾ. ಅಕ್ಕೈ ಪದ್ಮಶಾಲಿ ಮಹಿಳೆ, ಪುರುಷರಂತೆ ನಮಗೂ ಬದುಕುವ ಹಕ್ಕಿದೆ ಆದ್ದರಿಂದ ನಮ್ಮ ಭಾವನೆಗಳನ್ನು ಗೌರವಿಸುವುದು ನಾಗರೀಕ ಸಮಾಜದ ಕರ್ತವ್ಯವಾಗಿದೆ ಎಂದು ತಿಳಿಸಿದರು. ಅಪರಾಧ ಚಟುವಟಿಕೆಗಳಿಗೆ ಲೈಂಗಿಕ ಅಲ್ಪಸಂಖ್ಯಾತರನ್ನು ಗುರಿ ಮಾಡುವುದನ್ನು ನಿಲ್ಲಿಸಬೇಕು ಜತೆಗೆ ಸಮಾಜ ಮತ್ತು ಸರ್ಕಾರ ಸಮುದಾಯದ ಏಳಿಗೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ರೋಟರಿ ಕ್ಲಬï ನ ರಾಮೇಗೌಡ, ವಿಜಯï ಕುಮಾರ್, ಶಿರೀಶ್ ನೆನೆ, ದೊಡ್ಡೇಗೌಡ, ವೆಂಕಟೇಶ್ ಮೂರ್ತಿ, ವಸಂತ್ ಚಂದ್ರ ಇತರರಿದ್ದರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ