ಅಭ್ಯರ್ಥಿಗಳ ಆಯ್ಕೆ ಸಂಬಂಧ ನಾಳೆ ಕಾಂಗ್ರೆಸ್ ಎರಡು ಹಂತದಲ್ಲಿ ಸಭೆ

ಬೆಂಗಳೂರು, ಅ.8- ಉಪಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಸಂಬಂಧ ನಾಳೆ ಕಾಂಗ್ರೆಸ್‍ನಲ್ಲಿ ನಡೆಯಲಿರುವ ಮಹತ್ವದ ಸಭೆಯಲ್ಲಿ ಎಐಸಿಸಿ ಪ್ರಧಾನಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ಕೆ.ಸಿ.ವೇಣುಗೋಪಾಲ್ ಭಾಗವಹಿಸುತ್ತಿದ್ದಾರೆ.
ನಾಳೆ ಎರಡು ಹಂತದಲ್ಲಿ ಸಭೆಗಳು ನಡೆಯುತ್ತಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯಲ್ಲಿ ಮತ್ತು ಕೆಪಿಸಿಸಿ ಕಚೇರಿಯಲ್ಲಿ ಎರಡು ಹಂತದ ಸಭೆಗಳನ್ನು ಆಯೋಜಿಸಲಾಗಿದೆ.

ಸಿದ್ದರಾಮಯ್ಯ ಅವರ ಮನೆಯಲ್ಲಿ ವೇಣುಗೋಪಾಲ್, ಉಪಮುಖ್ಯಮಂತ್ರಿ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್‍ಖಂಡ್ರೆ, ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಮತ್ತಿತರ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಚುನಾವಣೆ ನಡೆಯುವ ಐದು ಕ್ಷೇತ್ರಗಳ ಪ್ರಮುಖ ನಾಯಕರ ಬಗ್ಗೆ ಕಾಂಗ್ರೆಸ್ ವರಿಷ್ಟರು ಮಾತುಕತೆ ನಡೆಸಲಿದ್ದಾರೆ.

ಉಪಚುನಾವಣೆ ಹಿನ್ನೆಲೆಯಲ್ಲಿ ನಾಳೆ ನಡೆಯುವ ಸಭೆ ಮಹತ್ವದ್ದಾಗಿದೆ. ಮೈತ್ರಿ ಧರ್ಮವನ್ನು ಯಾವ ರೀತಿ ಪಾಲನೆ ಮಾಡಬೇಕು, ಜೆಡಿಎಸ್‍ಗೆ ಬಿಟ್ಟುಕೊಟ್ಟಿರುವ ಕ್ಷೇತ್ರಗಳಲ್ಲಿ ಬಹಿರಂಗವಾಗಿ ಪ್ರಚಾರದಲ್ಲಿ ಭಾಗವಹಿಸಬೇಕೆ, ಬೇಡವೇ ಎಂಬ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗುತ್ತದೆ.
ಚುನಾವಣಾ ರಣತಂತ್ರವಾಗಿ ಬಿಜೆಪಿಯ ಮತಗಳನ್ನು ವಿಭಜನೆ ಮಾಡಲು ಕೆಲವು ಕ್ಷೇತ್ರಗಳಲ್ಲಿ ಡಮ್ಮಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಚರ್ಚೆಗಳು ನಡೆಯುತ್ತಿದ್ದು, ನಾಳಿನ ಸಭೆಯಲ್ಲಿ ಆ ಬಗ್ಗೆಯೂ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಲಾಗುವುದು.

ಶಿವಮೊಗ್ಗ ಕ್ಷೇತ್ರವನ್ನು ಉಳಿಸಿಕೊಳ್ಳಬೇಕೆ, ಜೆಡಿಎಸ್‍ಗೆ ಬಿಟ್ಟುಕೊಡಬೇಕೆ ಎಂಬ ಬಗ್ಗೆಯೂ ಚರ್ಚೆ ನಡೆಯಲಿದೆ. ಪ್ರಮುಖವಾಗಿ ನಾಳೆಯೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗಳು ಆರಂಭವಾಗೊಳ್ಳುತ್ತಿರುವುದರಿಂದ ಅಭ್ಯರ್ಥಿಗಳನ್ನು ನಾಳೆಯ ಸಭೆಯಲ್ಲೇ ಅಖೈರುಗೊಳಿಸಲಾಗುತ್ತಿದೆ. ಉಪ ಚುನಾವಣೆ ಪ್ರಚಾರ ಕಾರ್ಯಕ್ರಮಗಳ ಕಾರ್ಯಸೂಚಿಯೂ ನಾಳೆಯೇ ನಿರ್ಧಾರವಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ