ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಹಿಂದೆ ಬಿದ್ದ 28 ಸಂಸದರು

Deve Gowda

ಬೆಂಗಳೂರು-ಇನ್ನೇನು 2019ರ ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇವೆ. ಮತ್ತೊಮ್ಮೆ ಮತ ಬೇಟೆಗೆ ಜನಪ್ರತಿಧಿನಿಗಳು ಸಜ್ಜಾಗುತ್ತಿದ್ದಾರೆ. ಆದರೆ ಐದು ವರ್ಷಗಳಲ್ಲಿ ರಾಜ್ಯದ 28 ಸಂಸದರು ತಮಗೆ ನಿಗದಿಪಡಿಸಿದ್ದ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಹಿಂದೆ ಬಿದ್ದಿದ್ದಾರೆ.
28 ಲೋಕಸಭಾ ಕ್ಷೇತ್ರಗಳ ಪೈಕಿ ಯಾವುದೇ ಒಬ್ಬ ಸಂಸದರು ಕೂಡ 100ಕ್ಕೆ 100ರಷ್ಟು ಅನುದಾನವನ್ನು ಖರ್ಚು ಮಾಡಿಲ್ಲ. ಬಳ್ಳಾರಿ ಸಂಸದರಾಗಿದ್ದ ಶ್ರೀರಾಮುಲು ಶೇ. 96 ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಶೇ.95ರಷ್ಟು ಹೊರತುಪಡಿಸಿದರೆ ಉಳಿದವರ್ಯಾರು ಅನುದಾನವನ್ನು ನಿರೀಕ್ಷಿತ ಪ್ರಮಾಣದಲ್ಲಿ ಬಳಕೆ ಮಾಡಿಲ್ಲ.

ಒಂದು ವರ್ಷಕ್ಕೆ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಒಬ್ಬ ಸಂಸದರಿಗೆ ಐದು ಕೋಟಿಯನ್ನು ಕೇಂದ್ರ ಸರ್ಕಾರ ನೀಡುತ್ತದೆ. ಈ ಹಣದಲ್ಲಿ ತಾವು ಪ್ರತಿನಿಧಿಸುವ ಕ್ಷೇತ್ರಗಳಿಗೆ ಸಮುದಾಯ ಭವನ, ಚರಂಡಿ ದುರಸ್ತಿ, ಅಂಗನವಾಡಿ ಕೇಂದ್ರಗಳ ನಿರ್ಮಾಣ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಬಳಸಬೇಕು.

ಕೇಂದ್ರ ಸಚಿವರಾದ ಬೆಂಗಳೂರು ದಕ್ಷಿಣ ಸಂಸದ ಅನಂತ್‍ಕುಮಾರ್ ಶೇ.61 ಹಾಗೂ ಮತ್ತೋರ್ವ ಕೇಂದ್ರ ಸಚಿವ, ಬಿಜಾಪುರ ಸಂಸದ ರಮೇಶ್ ಜಿಗಜಿಣಗಿ ಶೇ.66.32ರಷ್ಟು ಅನುದಾನವನ್ನು ಬಳಸುವ ಮೂಲಕ ಕಳಪೆ ಪ್ರದರ್ಶನ ಮಾಡಿದ್ದಾರೆ.

2011ರವರೆಗೆ ಒಬ್ಬ ಸಂಸದರಿಗೆ ಕ್ಷೇತ್ರ ಅಭಿವೃದ್ದಿಗಾಗಿ ಎರಡು ಕೋಟಿ ನೀಡಲಾಗುತ್ತಿತ್ತು. ಈ ಹಣ ಕಡಿಮೆಯಾಗುತ್ತದೆ ಎಂದು ಸಂಸದರು ತಗಾದೆ ತೆಗೆದಿದ್ದರಿಂದ ಯುಪಿಎ ಸರ್ಕಾರ ಹಾಲಿ ಇರುವ ನಿಯಮಕ್ಕೆ ತಿದ್ದುಪಡಿ ಮಾಡಿ ಸಂಸದರ ಕ್ಷೇತ್ರ ಅಭಿವೃದ್ದಿಗಾಗಿ ಐದು ಕೋಟಿಯನ್ನು ನೀಡುತ್ತದೆ.
2014ರ ನಂತರ ರಾಜ್ಯದ ಯಾವುದೇ ಸಂಸದರು ಪ್ರತಿ ವರ್ಷ 5 ಕೋಟಿ ಪೂರ್ಣ ಮಟ್ಟದ ಅನುದಾನವನ್ನು ಬಳಕೆ ಮಾಡದಿರುವುದು ಅಂಕಿ ಅಂಶಗಳಿಂದಲೇ ಸಾಬೀತಾಗಿದೆ.

28 ಸಂಸದರಿಗೆ ಐದು ಕೋಟಿ ಎಂದರೆ ವರ್ಷಕ್ಕೆ 140 ಕೋಟಿ. ಇದನ್ನು ಐದು ವರ್ಷಕ್ಕೆ ಪರಿವರ್ತಿಸಿದರೆ 700 ಕೋಟಿ ಕೇಂದ್ರದಿಂದ ಅನುದಾನ ಬರುತ್ತದೆ. 2014 ಮತ್ತು 2018ರ ಸೆಪ್ಟೆಂಬರ್ ಅಂತ್ಯಕ್ಕೆ ಕೇಂದ್ರದಿಂದ ಸಂಸದರ ಪ್ರದೇಶಾಭಿವೃದ್ದಿಗೆ ಒಟ್ಟು ಬಿಡುಗಡೆಯಾಗಿರುವುದು 452.05 ಕೋಟಿ.
ಇದರಲ್ಲಿ ಖರ್ಚಾಗಿರುವುದು 358.7 ಕೋಟಿ ಆಯಾ ವರ್ಷಕ್ಕೆ ನಿಗದಿತ ಸಮಯದೊಳಗೆ ಅನುದಾನವನ್ನು ಬಳಕೆ ಮಾಡದಿದ್ದರೆ ಹಣ ಪುನಃ ಕೇಂದ್ರಕ್ಕೆ ಹಿಂದಿರುಗುತ್ತದೆ.

ಕ್ಷೇತ್ರದ ಮೂಲಭೂತ ಸೌಕರ್ಯಗಳಿಗೆ ಸಂಸದರು ಸ್ಪಂದಿಸಬೇಕೆಂಬ ಕಾರಣಕ್ಕಾಗಿಯೇ ಕೇಂದ್ರ ಅನುದಾನವನ್ನು ನೀಡುತ್ತದೆ. ಆದರೆ ಸಂಸದರ ನಿರ್ಲಕ್ಷ್ಯತೆಯಿಂದಾಗಿ ಕೇಂದ್ರದಿಂದ ಬರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಅದೇ ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಉತ್ತರ ಭಾರತದ ಬಹುತೇಕ ಎಲ್ಲ ರಾಜ್ಯಗಳ ಸಂಸದರು ಅನುದಾನವನ್ನು ಕಾಲ ಮಿತಿಯೊಳಗೆ ಬಳಕೆ ಮಾಡಿಕೊಂಡು ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಿದ್ದಾರೆ.
ಆದರೆ ಕರ್ನಾಟಕದ ಸಂಸದರು ಮಾತ್ರ ಇನ್ನು ನಿರ್ಲಕ್ಷ್ಯತೆಯಿಂದ ಹೊರಬಾರದಿರುವುದು ಅತ್ಯಂತ ನೋವಿನ ಸಂಗತಿ.
ಸಂಸದರ ಅನುದಾನದ ಖರ್ಚಿನ ವಿವರ:
ಹೆಸರುಜಿಲ್ಲೆಶೇಕಡವಾರು
ಪಿ.ಸಿ.ಗದ್ದಿಗೌಡರುಬಾಗಲಕೋಟೆಶೇ.78.27
ಶ್ರೀರಾಮುಲುಬಳ್ಳಾರಿಶೇ.96
ಸುರೇಶ್ ಅಂಗಡಿಬೆಳಗಾವಿಶೇ.75.08
ಡಿ.ವಿ.ಸದಾನಂದಗೌಡಬೆ. ಉತ್ತರಶೇ.81
ಎಚ್.ಎನ್.ಅನಂತಕುಮಾರ್ ಬೆ.ದಕ್ಷಿಣಶೇ.61
ಭಗವಂತ್ ಕೂಬಬೀದರ್ ಶೇ.83.39
ರಮೇಶ್ ಜಿಗಜಿಣಗಿಬಿಜಾಪುರಶೇ.66.32
ಆರ್.ಧ್ರುವನಾರಾಯಣಚಾಮರಾಜನಗರಶೇ.81.11
ಎಂ.ವೀರಪ್ಪ ಮೊಯ್ಲಿಚಿಕ್ಕಬಳ್ಳಾಪುರಶೇ.72.23
ಪ್ರಕಾಶ್ ಹುಕ್ಕೇರಿಚಿಕ್ಕೋಡಿಶೇ.78.56
ಶೋಭ ಕರಂದ್ಲಾಜೆಉಡುಪಿಚಿಕ್ಕಮಗಳೂರುಶೇ.90.34
ಬಿ.ಎನ್.ಚಂದ್ರಪ್ಪಚಿತ್ರದುರ್ಗಶೇ.77.79
ಜಿ.ಎಂ.ಸಿದ್ದೇಶ್ವರದಾವಣಗೆರೆಶೇ.84.34
ಪ್ರಹ್ಲಾದ್ ಜೋಷಿ ಧಾರವಾಡಶೇ.68.75
ಶಿವಕುಮಾರ್ ಉದಾಸಿಹಾವೇರಿಶೇ.73.98
ಎಚ್.ಡಿ.ದೇವೇಗೌಡಹಾಸನಶೇ.95
ಮಲ್ಲಿಕಾರ್ಜುನ ಖರ್ಗೆಕಲಬುರಗಿಶೇ.86.29
ನಳಿನ್‍ಕುಮಾರ್ ಕಟೀಲ್‍ದ.ಕನ್ನಡ ಶೇ.93.03
ಅನಂತ್‍ಕುಮಾರ್ ಹೆಗಡೆಉ.ಕನ್ನಡಶೇ.62
ಕೆ.ಎಚ್.ಮುನಿಯಪ್ಪ ಕೋಲಾರಶೇ.73.67
ಕರಡಿ ಸಂಗಣ್ಣಕೊಪ್ಪಳಶೇ.80.5
ಸಿ.ಎಸ್.ಪುಟ್ಟರಾಜುಮಂಡ್ಯಶೇ.83.85
ಡಿ.ಕೆ.ಸುರೇಶ್‍ಬೆಂ. ಗ್ರಾಮಾಂತರಶೇ.72.09
ಪ್ರತಾಪ್ ಸಿಂಹ ಮೈಸೂರು-ಕೊಡುಗುಶೇ.81.13
ಬಿ.ವಿ.ನಾಯಕ್‍ರಾಯಚೂರುಶೇ.74.01
ಬಿ.ಎಸ್.ಯಡಿಯೂರಪ್ಪ ಶಿವಮೊಗ್ಗಶೇ.71.01
ಮುದ್ದ ಹನುಮೇಗೌಡತುಮಕೂರುಶೇ.78.03

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ