ಬೆಂಗಳೂರು, ಅ.7- ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ ಸವಾಲಾಗಿದ್ದು, ಪ್ರತಿಪಕ್ಷ ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಬಂಡಾಯ ಚಟುವಟಿಕೆಗಳು ತಣ್ಣಗಾಗಿ ಸಮ್ಮಿಶ್ರ ಸರ್ಕಾರ ನಿಟ್ಟುಸಿರುವ ಬಿಡುವ ಹಂತದಲ್ಲೇ ಅನಿರೀಕ್ಷಿತವಾಗಿ ಎದುರಾಗಿರುವ ಉಪಚುನಾವಣೆಗಳಿಗೆ ಮೂರೂ ಪಕ್ಷಗಳು ಹರಿಬಿರಿಯಲ್ಲಿ ತಯಾರಿ ಆರಂಭಿಸಿವೆ.
ಲೋಕಸಭೆಯಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಬಿ.ಎಸ್.ಯಡಿಯೂರಪ್ಪ ಅವರಿಂದ ತೆರವಾದ ಶಿವಮೊಗ್ಗಕ್ಕೆ, ಶ್ರೀರಾಮುಲು ಅವರಿಂದ ತೆರವಾದ ಬಳ್ಳಾರಿಗೆ, ಸಿ.ಎಸ್.ಪುಟ್ಟರಾಜು ಅವರಿಂದ ತೆರವಾದ ಮಂಡ್ಯಕ್ಕೆ ಹಾಗೂ ಅಪಘಾತದಲ್ಲಿ ಅಕಾಲಿಕ ಮರಣಕ್ಕೀಡಾದ ಕಾಂಗ್ರೆಸ್ ಶಾಸಕ ಸಿದ್ದುನ್ಯಾಮೇಗೌಡ ಅವರಿಂದ ತೆರವಾದ ಜಮಖಂಡಿ ವಿಧಾನಸಭಾ ಕ್ಷೇತ್ರಕ್ಕೆ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಚನ್ನಪಟ್ಟಣವನ್ನು ಉಳಿಸಿಕೊಂಡು ರಾಮನಗರವನ್ನು ತೆರವುಗೊಳಿಸಿದ್ದರಿಂದ ಈ ಐದೂ ಕ್ಷೇತ್ರಗಳಿಗೆ ನವೆಂಬರ್ 3ರಂದು ಉಪಚುನಾವಣೆ ನಡೆಯುತ್ತಿದೆ.
ಈ ಕ್ಷೇತ್ರಗಳ ಪೈಕಿ ಶಿವಮೊಗ್ಗ, ಬಳ್ಳಾರಿ ಬಿಜೆಪಿಯ ಭದ್ರಕೋಟೆಗಳಾಗಿವೆ. ಮಂಡ್ಯ, ರಾಮನಗರ ಜೆಡಿಎಸ್ನ ಭದ್ರಕೋಟೆಯಾಗಿವೆ. ಇನ್ನು ಬಾಗಲಕೋಟೆ ಜಿಲ್ಲೆ ಜಮಖಂಡಿ ಕಾಂಗ್ರೆಸ್ನ ಕಣವಾಗಿದೆ. ಹೀಗಾಗಿ ಉಪಚುನಾವಣೆಯ ಫಲಿತಾಂಶ ಈ ಹಿಂದಿನಂತೆ ಮರುಕಳಿಸುವ ಸಾಧ್ಯತೆಗಳು ಕಡಿಮೆ ಇವೆ.
ಮುಂದಿನ ಆರು ತಿಂಗಳಲ್ಲಿ ಲೋಕಸಭೆ ಚುನಾವಣೆ ಎದುರಾಗುವ ಸಾಧ್ಯತೆ ಇರುವುದರಿಂದ ಈಗ ನಡೆಯುತ್ತಿರುವ ಉಪಚುನಾವಣೆ ರಾಜಕೀಯದ ಸೆಮಿಫೈನಲ್ ಎಂದೇ ಹೇಳಲಾಗುತ್ತಿದ್ದು, ಮೇಲಾಗಿ ದೋಸ್ತಿ ಸರ್ಕಾರಕ್ಕೆ ಅಗ್ನಿ ಪರೀಕ್ಷೆಯಾಗಿದೆ.
ರಾಜ್ಯದ ವಿಧಾನಸಭೆ ಚುನಾವಣೆ ನಂತರ ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ರಚಿಸಿದ ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಮುಂದೆ ನಡೆಯುವ ಲೋಕಸಭೆ ಚುನಾವಣೆಗೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಣೆ ಮಾಡಿದ್ದವು.
ಅದಕ್ಕೂ ಮುನ್ನ ಎದುರಾಗಿರುವ ಉಪಚುನಾವಣೆಗಳಲ್ಲಿ ಮೈತ್ರಿ ಮಾಡಿಕೊಳ್ಳುವುದಾಗಿ ಹೇಳಿವೆ. ಈ ಬಗ್ಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಅಧಿಕೃತವಾಗಿ ಘೋಷಣೆಯನ್ನೂ ಮಾಡಿದ್ದಾರೆ.
ಉಪಚುನಾವಣೆಯ ಹೋರಾಟ ಮೈತ್ರಿಕೂಟದ ಬಲಾಬಲ ಪರೀಕ್ಷೆಯಾಗಿದೆ. ಇನ್ನು ಜಯ ಸಾಧಿಸಿದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮುಂದುವರಿಸಲು ಎರಡೂ ಪಕ್ಷಗಳಿಗೆ ಆತ್ಮವಿಶ್ವಾಸ ಹೆಚ್ಚಾಗಲಿದೆ. ಇಲ್ಲವಾದರೆ ಮೈತ್ರಿ ಮಾಡಿಕೊಂಡರೂ ಬಿಜೆಪಿಯನ್ನು ಸೋಲಿಸಲಾಗುವುದಿಲ್ಲ ಎಂಬ ಸಂದೇಶ ರವಾನೆಯಾಗುತ್ತದೆ. ಎರಡೂ ಪಕ್ಷಗಳ ನಾಯಕರು ಮತ್ತೊಮ್ಮೆ ತಮ್ಮ ನಿರ್ಧಾರಗಳನ್ನು ಪುನರ್ ಪರಿಶೀಲಿಸುವ ಅನಿವಾರ್ಯತೆ ಎದುರಾಗುತ್ತದೆ.
ಲೋಕಸಭೆ ಚುನಾವಣೆಗೆ ಕ್ಷೇತ್ರಗಳ ಹಂಚಿಕೆ ವಿಷಯವಾಗಿ ಈಗಾಗಲೇ ಗೊಂದಲಗಳಿವೆ. ಉಪಚುನಾವಣೆಯ ಫಲಿತಾಂಶ ಮೈತ್ರಿಕೂಟವನ್ನು ಇನ್ನಷ್ಟು ಬಲಪಡಿಸಲಿದೆಯೋ ಇಲ್ಲವೋ ಎಂಬ ಕುತೂಹಲ ಕಾಡುತ್ತಿದೆ.
ಪ್ರತಿಪಕ್ಷವಾಗಿರುವ ಬಿಜೆಪಿಗೆ ಉಪಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಬಿಜೆಪಿ ಒಲ್ಲದ ಮನಸ್ಸಿನಿಂದಲೇ ಚುನಾವಣೆಗೆ ತಯಾರಾಗಿದ್ದು, ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆ ಕರೆದು ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ನಡೆಸುತ್ತಿದೆ. ಜತೆಗೆ ಜೆಡಿಎಸ್-ಕಾಂಗ್ರೆಸ್ನ ಅತೃಪ್ತರನ್ನು ಸೆಳೆದುಕೊಳ್ಳುವ ತಂತ್ರಗಾರಿಕೆ ಅನುಸರಿಸುತ್ತಿದೆ.
ಮೂರೂ ಪಕ್ಷಗಳಲ್ಲೂ ಅಭ್ಯರ್ಥಿಗಳ ಆಯ್ಕೆಗೆ ಭಾರೀ ಕಸರತ್ತು ನಡೆಯುತ್ತಿದೆ. ಜೆಡಿಎಸ್ ರಾಮನಗರ ಮತ್ತು ಮಂಡ್ಯ ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಈಗಾಗಲೇ ಸಮಾಲೋಚನೆ ಆರಂಭಿಸಿದ್ದು, ಮಂಡ್ಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ಗೌಡ, ರಾಮನಗರದಲ್ಲಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಬೇಕೆಂಬ ಒತ್ತಾಯ ಕಾರ್ಯಕರ್ತರಿಂದ ಕೇಳಿಬಂದಿದೆ.
ಅದರ ಹೊರತಾಗಿ ಹಲವಾರು ಮಂದಿ ಈ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಆಕಾಂಕ್ಷಿಗಳಾಗಿದ್ದಾರೆ. ಅಂತಿಮವಾಗಿ ಪಕ್ಷದ ವರಿಷ್ಠರಾದ ದೇವೇಗೌಡ, ಕುಮಾರಸ್ವಾಮಿ ಮತ್ತು ರೇವಣ್ಣ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಬಿಜೆಪಿ ಈ ಐದೂ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ದೋಸ್ತಿಗಳೊಂದಿಗೆ ಕುಸ್ತಿಗೆ ಸಿದ್ಧವಾಗಿದೆ. ಜಮಖಂಡಿ, ಬಳ್ಳಾರಿ, ಶಿವಮೊಗ್ಗದಲ್ಲಿ ಬಿಜೆಪಿ ಬಲವಾಗಿದ್ದು, ಕಾಂಗ್ರೆಸ್ಗೆ ಪ್ರತಿಗುದ್ದು ನೀಡಲು ಕಸರತ್ತು ನಡೆಸುತ್ತಿದೆ.
ಕಾಂಗ್ರೆಸ್ ಜಮಖಂಡಿ ಮತ್ತು ಬಳ್ಳಾರಿ ಕ್ಷೇತ್ರಗಳ ಮೇಲೆ ವಿಶ್ವಾಸ ಹೊಂದಿದ್ದು, ಶತಾಯ-ಗತಾಯ ಜಮಖಂಡಿಯನ್ನು ಉಳಿಸಿಕೊಂಡು ಬಳ್ಳಾರಿಯನ್ನು ಗೆಲ್ಲುವ ತಯಾರಿಯಲ್ಲಿದೆ.
ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಚಕ್ರವ್ಯೂಹವನ್ನು ಭೇದಿಸುವುದು ಸುಲಭದ ಮಾತಲ್ಲ ಎಂಬ ಅಭಿಪ್ರಾಯ ಕಾಂಗ್ರೆಸ್ನಲ್ಲಿ ಕೇಳಿಬರುತ್ತಿದೆ. ಈ ಹಿಂದೆ ಜೆಡಿಎಸ್ನಿಂದ ಹಿರಿಯ ನಟ ಶಿವರಾಜ್ಕುಮಾರ್ ಅವರ ಪತ್ನಿ ಹಾಗೂ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರಿ ಗೀತಾ ಅವರು ಸ್ಪರ್ಧಿ ಸಿದರಾದರೂ ಪ್ರಬಲ ಪೈಪೆÇೀಟಿ ನೀಡಲು ವಿಫಲರಾಗಿದ್ದರು.
ಈ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಿಂದ ಅಭ್ಯರ್ಥಿಯಾಗಿರುವುದರಿಂದ ಬಹುತೇಕ ತೀವ್ರ ಸ್ಪರ್ಧೆ ನೀಡಬಹುದು ಎಂಬ ಲೆಕ್ಕಾಚಾರಗಳಿವೆ. ಆದರೆ, ಗೀತಾ ಅವರಿಗಿಂತಲೂ ಜೆಡಿಎಸ್ನ ಮಾಜಿ ಶಾಸಕ ಮಧು ಬಂಗಾರಪ್ಪ ಅವರನ್ನು ಕಣಕ್ಕಿಳಿಸಿದರೆ ಹೆಚ್ಚು ಲಾಭದಾಯಕ ಎಂಬ ಮಾತುಗಳು ಕೇಳಿಬಂದಿವೆ.
ಕಾಂಗ್ರೆಸ್ನಿಂದ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್ ಮತ್ತು ಹಿರಿಯ ನಾಯಕ ಮಂಜುನಾಥ್ ಭಂಡಾರಿ ಈ ಕ್ಷೇತ್ರದಲ್ಲಿ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದರಾದರೂ ಪಕ್ಷದ ಹಿರಿಯ ನಾಯಕರಲ್ಲಿ ಶಿವಮೊಗ್ಗ ಕ್ಷೇತ್ರದ ಬಗ್ಗೆ ನಿರಾಸಕ್ತಿ ಇದ್ದಂತಿದೆ.
ಒಟ್ಟಿನಲ್ಲಿ ಐದು ಕ್ಷೇತ್ರಗಳ ಚುನಾವಣೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಬಲಾಬಲ ಪರೀಕ್ಷೆಯಾಗಿದ್ದು, ಬಿಜೆಪಿಗೆ ಲೋಕಸಭೆಯ ಸೆಮಿಫೈನಲ್ಗೂ ಮುನ್ನ ತನ್ನ ಸಾಮಥ್ರ್ಯ ಪರೀಕ್ಷೆಗೆ ವೇದಿಕೆ ಸಿಕ್ಕಂತಾಗಿದೆ.