ಬೆಂಗಳೂರು, ಅ.7- ದೋಸ್ತಿ ಸರ್ಕಾರದಲ್ಲಿ ಇತ್ತೀಚೆಗಷ್ಟೆ ತಣ್ಣಗಾಗಿದ್ದ ಬಂಡಾಯ ಮತ್ತೆ ಹೊಗೆಯಾಡಲಾರಂಭಿಸಿದೆ. ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವುದಕ್ಕೆ ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ತಮ್ಮ ಪಕ್ಷದ ನಾಯಕರ ವಿರುದ್ಧವೇ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟ್ವಿಟ್ಟರ್ನಲ್ಲಿ ಇಂದು ಬೆಳಗ್ಗೆ ಟ್ವಿಟ್ ಮಾಡಿರುವ ಬಿ.ಸಿ.ಪಾಟೀಲ್ ಕಾಂಗ್ರೆಸ್ ನಾಯಕರನ್ನು ಸರ್ವಾಧಿಕಾರಿಗಳು ಎಂದು ಜರಿದಿದ್ದಾರೆ.
ರಾಜ್ಯ ಕಾಂಗ್ರೆಸ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಪರಮೇಶ್ವರ್ ಅವರ ಹೆಸರಿಗೆ ನೇರವಾಗಿ ಟ್ವಿಟ್ ಮಾಡಿರುವ ಬಿ.ಸಿ.ಪಾಟೀಲ್, ಕಾಂಗ್ರೆಸ್ ಶಾಸಕರುಗಳನ್ನು ಅವಮಾನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂದುವರಿದು ತಮ್ಮ ಸಿಟ್ಟನ್ನು ಬಹಿರಂಗಪಡಿಸಿರುವ ಬಿ.ಸಿ.ಪಾಟೀಲ್, ಸಂಪುಟ ವಿಸ್ತರಣೆಯನ್ನು ಅನಗತ್ಯವಾಗಿ ವಿಳಂಬ ಮಾಡುವ ಮೂಲಕ ಶಾಸಕರಿಗೆ ಅವಮಾನ ಮಾಡಲಾಗುತ್ತಿದೆ, ಪ್ರಜಾಪ್ರಭುತ್ವವನ್ನು ಕೊಲ್ಲಲಾಗುತ್ತಿದೆ, ಸರ್ವಾಧಿಕಾರಿ ಧೋರಣೆ ಎತ್ತಿಹಿಡಿಯಲಾಗುತ್ತಿದೆ ಎಂದು ಕೆಂಡಕಾರಿದ್ದಾರೆ.
ಎಲ್ಲವೂ ನಿಗದಿಯಂತೆ ನಡೆದಿದ್ದರೆ ಅ.12ಕ್ಕೆ ಸಚಿವ ಸಂಪುಟ ವಿಸ್ತರಣೆಯಾಗಬೇಕಿತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ ಸಂಪುಟ ವಿಸ್ತರಣೆಯ ದಿನಾಂಕವನ್ನೂ ಈಗಾಗಲೇ ಘೋಷಣೆ ಮಾಡಿದ್ದರು. ಆದರೆ, ಕುಮಾರಸ್ವಾಮಿ ಅವರಲ್ಲಿದ್ದ ಕಾಳಜಿ ಕಾಂಗ್ರೆಸ್ ನಾಯಕರಲ್ಲಿ ಕಾಣಲಿಲ್ಲ. ಉಪಮುಖ್ಯಮಂತ್ರಿ ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರುಗಳು ಸಂಪುಟ ವಿಸ್ತರಣೆ ಬಗ್ಗೆ ನಿರಾಸಕ್ತಿ ತೋರಿಸಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಅ.6ರಂದು ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಆದರೆ, ಕಾಂಗ್ರೆಸ್ ನಾಯಕರ್ಯಾರೂ ಅತ್ತ ತಲೆ ಹಾಕಲಿಲ್ಲ. ಇದು ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಕಾಂಗ್ರೆಸ್ ಪಾಳಯದಿಂದ ಆರು ಮಂದಿ ಸಚಿವರನ್ನು ಸಂಪುಟಕ್ಕೆ ಸೇರಿಸಬೇಕಿದೆ. ಆದರೆ, ಆರು ಸ್ಥಾನಗಳಿಗೆ ಪಕ್ಷದಲ್ಲಿ 60ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಹೀಗಾಗಿ ಕಾಂಗ್ರೆಸ್ ಸಂಪುಟ ವಿಸ್ತರಣೆಗೆ ಕೈ ಹಾಕಿದರೆ ಜೇನುಗೂಡಿಗೆ ಕಲ್ಲೆಸೆದಂತೆ ಎಂಬ ಕಾರಣಕ್ಕಾಗಿ ಕಾಲಹರಣ ಮಾಡುತ್ತಿದೆ.
ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲೇ ಮಾಜಿ ಸಚಿವ ಹಾಗೂ ಹಿರಿಯ ಶಾಸಕ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಒಂದು ಸುತ್ತಿನ ಬಂಡಾಯ ಚಟುವಟಿಕೆ ನಡೆದವು. ಎರಡನೆ ಹಂತದಲ್ಲಿ ರಮೇಶ್ ಜಾರಕಿಹೊಳಿ ಮತ್ತು ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಬಂಡಾಯದ ಅಂಕ ನಡೆದಿತ್ತು.
ಈ ಮಧ್ಯೆ ಅಲ್ಲಲ್ಲಿ ಶಾಸಕರಾದ ಎಂ.ಟಿ.ಬಿ.ನಾಗರಾಜ್, ಸುಧಾಕರ್ ಮತ್ತಿತರರು ದೋಸ್ತಿ ಸರ್ಕಾರದ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಿಸಿದ್ದರು. ಬಿ.ಸಿ.ಪಾಟೀಲ್ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದು, ಎಂದಿಗೂ ಬಹಿರಂಗ ಹೇಳಿಕೆ ನೀಡಿರಲಿಲ್ಲ.
ಉಪಚುನಾವಣೆಯನ್ನು ನೆಪವಾಗಿಟ್ಟುಕೊಂಡು ಸಂಪುಟ ವಿಸ್ತರಣೆ ಮುಂದೂಡಿದ್ದರಿಂದ ತಾಳ್ಮೆ ಕಳೆದುಕೊಂಡಂತಿರುವ ಬಿ.ಸಿ.ಪಾಟೀಲ್ ಟ್ವಿಟ್ಟರ್ ಮೂಲಕ ತಮ್ಮ ಸಿಟ್ಟು ಹೊರಹಾಕಿದ್ದಾರೆ.
ಈ ಮೊದಲು ಬಂಡಾಯ ಚಟುವಟಿಕೆ ನಡೆದಾಗ ಬಿಜೆಪಿ ಆಪರೇಷನ್ ಕಮಲ ನಡೆಸಿತ್ತು. ಅದರಲ್ಲಿ ಬಿ.ಸಿ.ಪಾಟೀಲ್ ಅವರನ್ನು ಸಂಪರ್ಕಿಸಿ ಸಾಕಷ್ಟು ಹಣ ಮತ್ತು ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರು. ಆದರೆ, ಬಿ.ಸಿ.ಪಾಟೀಲ್ ಎಲ್ಲಿಯೂ ಹೋಗದೆ ಪಕ್ಷದಲ್ಲೇ ಉಳಿದಿದ್ದರು. ಈಗ ಸಚಿವ ಸ್ಥಾನ ನೀಡುವುದು ವಿಳಂಬವಾಗುತ್ತಿರುವ ಬಗ್ಗೆ ಅವರ ಅಸಮಾಧಾನ ಹೊರಬಿದ್ದಿದೆ.