ಕೆಐಎಡಿಬಿ ಅಭಿವೃದ್ಧಿ ಮುಖ್ಯ ಅಧಿಕಾರಿ ಟಿ.ಆರ್.ಸ್ವಾಮಿ ಆಸ್ಪತ್ರೆಗೆ ದಾಖಲು

ಬೆಂಗಳೂರು, ಅ.7- ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ಎಸಿಬಿ ದಾಳಿಗೊಳಗಾಗಿ ವಿಚಾರಣೆ ಎದುರಿಸಬೇಕಾಗಿದ್ದ ಕೆಐಎಡಿಬಿ ಅಭಿವೃದ್ಧಿ ಮುಖ್ಯ ಅಧಿಕಾರಿ ಟಿ.ಆರ್.ಸ್ವಾಮಿ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೊನ್ನೆ ಎಸಿಬಿ ದಾಳಿ ನಡೆದ ವೇಳೆ ಅವರ ಮನೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಸ್ಥಿರಾಸ್ತಿ, ಚರಾಸ್ತಿ ದಾಖಲೆಗಳು ಪತ್ತೆಯಾಗಿದ್ದವು. 4.3 ಕೋಟಿ ರೂ. ನಗದು, ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಎಸಿಬಿ ಅಧಿಕಾರಿಗಳು ಪತ್ತೆಹಚ್ಚಿದ್ದರು.

ಅಷ್ಟೇ ಅಲ್ಲದೆ, ಅವರ ಬಳಿ ಇರುವ ಅಕ್ರಮ ಆಸ್ತಿ ಬಗ್ಗೆ ಇನ್ನಷ್ಟು ಮಾಹಿತಿ ಸಾರ್ವಜನಿಕರಿಂದ ಹರಿದುಬರುತ್ತಿತ್ತು. ಸುಮಾರು 500 ಮಂದಿ ಸಾರ್ವಜನಿಕರು ಐಜಿಪಿಯಿಂದ ತನಿಖಾಧಿಕಾರಿಗಳವರೆಗೆ ಕರೆ ಮಾಡಿ ಅಕ್ರಮ ಆಸ್ತಿಯಿರುವ ಬಗ್ಗೆ ಮಾಹಿತಿ ನೀಡಿದ್ದರು. ಸುಮಾರು 70 ಇ-ಮೇಲ್ ಸಂದೇಶಗಳು ಮಾಹಿತಿಗಳ ವಿವರ ಒದಗಿಸಿದ್ದವು. ಅಷ್ಟೆಲ್ಲ ಮಾಹಿತಿ ಕ್ರೋಢೀಕರಿಸಿದ ಎಸಿಬಿ ಎಲ್ಲದಕ್ಕೂ ಸಮಜಾಯಿಷಿ ನೀಡುವಂತೆ ಸಮನ್ಸ್ ಜಾರಿ ಮಾಡಿತ್ತು.

ಸಮನ್ಸ್ ಪಡೆದ ಟಿ.ಆರ್.ಸ್ವಾಮಿ ಅವರು ಇಂದು ವಿಚಾರಣೆಗೆ ಹಾಜರಾಗಬೇಕಿತ್ತು. ಎಸಿಬಿ ದಾಳಿ ವೇಳೆ ಸ್ವಾಮಿ ಅವರು ಬಾಗಿಲು ತೆರೆಯದೆ ಸುಮಾರು 45 ನಿಮಿಷಗಳ ಕಾಲ ಅಧಿಕಾರಿಗಳನ್ನು ಹೊರಗೆ ನಿಲ್ಲುವಂತೆ ಮಾಡಿದ್ದರು. ಬಗೆಬಗೆಯಾಗಿ ಎಚ್ಚರಿಕೆ ನೀಡಿದ್ದರೂ ಸ್ವಾಮಿ ಜಪ್ಪಯ್ಯ ಎನ್ನದೆ ಬಾಗಿಲು ತೆರೆಯದೆ ಒಳಗಿದ್ದುಕೊಂಡೇ ತಮ್ಮ ಅಕ್ರಮ ಆಸ್ತಿ ಹಾಗೂ ನಗದನ್ನು ಬಟ್ಟೆ ಬ್ಯಾಗಿನಲ್ಲಿ ಸುತ್ತಿ ಕಿಟಕಿಯಿಂದ ಹೊರಗೆಸೆದಿದ್ದರು. ಇದನ್ನು ಎಸಿಬಿ ಅಧಿಕಾರಿಗಳು ಸಾಕ್ಷ್ಯನಾಶದ ಪ್ರಯತ್ನ ಎಂದು ಪರಿಗಣಿಸಿದ್ದಾರೆ. ಇದು ಗಂಭೀರ ಅಪರಾಧವಾಗಿದ್ದು, ವಿಚಾರಣೆ ವೇಳೆ ಸರಿಯಾದ ಸ್ಪಷ್ಟನೆ ಸಿಗದೆ ಇದ್ದರೆ ಬಂಧಿಸಲು ಕಾನೂನಿನಲ್ಲಿ ಅವಕಾಶವಿದೆ ಎನ್ನಲಾಗಿದೆ.

ಅಕ್ರಮ ಆಸ್ತಿ ಪ್ರಕರಣಗಳಲ್ಲಿ ಸರ್ಕಾರಿ ಅಧಿಕಾರಿಗಳನ್ನು ಏಕಾಏಕಿ ಬಂಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಹೀಗಾಗಿ ಮೊನ್ನೆಯೇ ಬಂಧನಕ್ಕೊಳಗಾಗಬೇಕಾಗಿದ್ದ ಟಿ.ಆರ್.ಸ್ವಾಮಿ ಅವರು ಎರಡು ದಿನಗಳ ಮಟ್ಟಿಗೆ ಬಂಧನದಿಂದ ತಪ್ಪಿಸಿಕೊಂಡಿದ್ದರು.

ದಾಳಿ ವೇಳೆ ಸಿಕ್ಕಿರುವ ಆಸ್ತಿ ಮತ್ತು ನಗದಿನ ಬಗ್ಗೆ ಎಸಿಬಿ ಅಧಿಕಾರಿಗಳು ನಿನ್ನೆ ಟಿ.ಆರ್.ಸ್ವಾಮಿಯವರ ಮನೆಗೆ ತೆರಳಿ ಮಾಹಿತಿ ಪಡೆದರು. ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದರಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಕ್ತದೊತ್ತಡ ಹಾಗೂ ಇತರ ಆರೋಗ್ಯ ಸಮಸ್ಯೆಯಿಂದಾಗಿ ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.
ಅವರ ಆರೋಗ್ಯ ಸುಧಾರಣೆ ನಂತರ ವಿಚಾರಣೆಗೆ ಹಾಜರಾಗಲು ಎಸಿಬಿ ಅಧಿಕಾರಿಗಳು ಅವಕಾಶ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ