ಬೆಂಗಳೂರು, ಅ.6 – ಸ್ವಾತಂತ್ರ್ಯ ಹೋರಾಟದ ಮಾದರಿಯಲ್ಲೇ ಅಶುಚಿತ್ವದ ವಿರುದ್ಧ ಹೋರಾಟ ಮಾಡುವ ಅನಿವಾರ್ಯತೆ ಇದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಎಲ್ಲ ಆಟದ ಮೈದಾನಗಳಲ್ಲಿ ಕಸ ತುಂಬಲಿದ್ದು, ಸಮುದ್ರದಲ್ಲಿ ಮೀನಿನ ಬದಲಾಗಿ ಪ್ಲಾಸ್ಟಿಕ್ ಇರುತ್ತದೆ ಎಂದು ಸ್ವಚ್ಛತಾ ಅಭಿಯಾನ ಕೋಶದ ನಿರ್ದೇಶಕ ಬಿ.ಕೆ.ಜಿಂದಾಲ್ ಆತಂಕ ವ್ಯಕ್ತಪಡಿಸಿದರು.
ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಲಾಗಿದ್ದ ಸ್ವಚ್ಛ ಸರ್ವೇಕ್ಷಣ್ -2019 ಸಮೀಕ್ಷೆ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಗಾಂಧೀಜಿ ಅವರು ಸ್ವಾತಂತ್ರ್ಯ ಪೂರ್ವದಲ್ಲೇ ನಮಗೆ ರಾಜಕೀಯ ಸ್ವಾತಂತ್ರ್ಯಕ್ಕಿಂತಲೂ ಮೊದಲು ಅಶುಚಿತ್ವದ ವಿರುದ್ದ ನಮಗೆ ಸ್ವಾತಂತ್ರ್ಯ ಬೇಕಿದೆ ಎಂದು ಪ್ರತಿಪಾದಿಸಿದ್ದರು ಎಂದು ಹೇಳಿದರು.
ನಿರಂತರ ಹೋರಾಟದಿಂದಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ಅಶುಚಿತ್ವದ ವಿರುದ್ದ ಈವರೆಗೂ ಸ್ವಾತಂತ್ರ್ಯ ಸಿಕ್ಕಿಲ್ಲ. ಆ ಸ್ವಾತಂತ್ರ್ಯ ಪಡೆಯಲು ಸ್ಥಳೀಯ ಸಂಸ್ಥೆಗಳು ಸೇರಿದಂತೆ ಎಲ್ಲರೂ ನಿರಂತರ ಹೋರಾಟ ನಡೆಸುತ್ತಿದ್ದೇವೆ ಎಂದರು.
ನಮ್ಮಲ್ಲಿ ಪ್ರತಿ ದಿನ ಸಾವಿರಾರು ಟನ್ಗಳು ಕಸ ಉತ್ಪಾದನೆಯಾಗುತ್ತಿದೆ. ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದಿದ್ದರೆ ಆಟದ ಮೈದಾನದಲ್ಲಿ 2050ರ ವೇಳಗೆ ಕಸದಿಂದ ತುಂಬಿ ಹೋಗಲಿದೆ. ಸಮುದ್ರದಲ್ಲಿ ಮೀನುಗಳ ಬದಲಾಗಿ ಬರೀ ಪ್ಲಾಸ್ಟಿಕ್ ಕಾಣಿಸಲಿವೆ. ಇದು ಅತ್ಯಂತ ಆತಂಕಕಾರಿ ವಿಷಯ ಎಂದು ಹೇಳಿದರು.
ಸ್ವಚ್ಛತಾ ಅಭಿಯಾನಕ್ಕೆ ಹೆಚ್ಚಿನ ದುಡ್ಡು ಖರ್ಚಾಗುವುದಿಲ್ಲ. ಆದರೆ ಜನರಲ್ಲಿ ಜಾಗೃತಿ ಮೂಡಬೇಕು ಎಂದು ಜಿಂದಾಲ್ ಹೇಳಿದರು.
ಜಪಾನ್, ಕೋರಿಯಾ ದೇಶಗಳು ಸ್ವಚ್ಛತೆಯಲ್ಲಿ ನಮಗಿಂತಲೂ ಹಿಂದೆ ಉಳಿದಿದ್ದವು. ತಡವಾಗಿ ಎಚ್ಚೆತ್ತುಕೊಂಡ ಆ ದೇಶಗಳು ಇಂದು ನಮಗಿಂತ ಮುಂದಿವೆ ಎಂದ ಅವರು, 2014ರಲ್ಲಿ ಪ್ರಧಾನಿ ಮೋದಿ ಸ್ವಚ್ಛ ಭಾರತ್ಗೆ ಕರೆ ನೀಡಿದ್ದರು. ಅಂದಿನಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸ್ವಚ್ಛತಾ ಎಂಬುದು ಕಟ್ಟಡ , ಸೇತುವೆ ನಿರ್ಮಿಸಿದಂತಲ್ಲ. ಜನರ ಸಹಭಾಗಿತ್ವ, ಸಹಕಾರ ಬಹಳ ಮುಖ್ಯ ಎಂದರು.
ಕೇಂದ್ರ ಸರ್ಕಾರ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಸಾಕಷ್ಟು ಉಪಕ್ರಮಗಳನ್ನು ಕೈಗೊಂಡಿದೆ. ಕಸದಿಂದ ನಿರ್ಮಾಣವಾಗುವ ಉರುವಲು ಇಟ್ಟಿಗೆಗಳನ್ನು ಸಿಮೆಂಟ್ ಕಾರ್ಖಾನೆಗಳು ಕಡ್ಡಾಯವಾಗಿ ಬಳಸಬೇಕೆಂಬ ನಿಯಮವಿದೆ. ಅದರ ಪ್ರಮಾಣ ಈ ಮೊದಲು ಶೇ.5ರಷ್ಟು ಇತ್ತು. ಕೇಂದ್ರ ಸರ್ಕಾರ ಇತ್ತೀಚೆಗೆ ಅದನ್ನು ಶೇ.15ಕ್ಕೆ ಹೆಚ್ಚಿಸಿದೆ. ಆರ್ಡಿಎಫ್ಗಳ ಸಾಗಾಣಿಕೆ ವೆಚ್ಚವನ್ನು 100 ಕಿ.ಮೀ ಅಂತರದೊಳಗೆ ಸಿಮೆಂಟ್ ಕಾರ್ಖಾನೆಗಳೇ ಭರಿಸಬೇಕು. ಒಂದು ವೇಳೆ 300 ಕಿ.ಮೀ ಅಂತರವಿದ್ದರೆ ಅದರ ಸಾಗಾಣಿಕೆ ವೆಚ್ಚವನ್ನು ಟಿಎಸ್ಆರ್ಎಫ್ ಮೂಲಕ ಬಳಸಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಸ್ವಚ್ಛತೆ ರ್ಯಾಕಿಂಗ್ನಲ್ಲಿ ಬೆಂಗಳೂರು ಸೇರಿದಂತೆ ಹಲವಾರು ನಗರಗಳು ಏರುಪೇರು ಕಾಣುತ್ತಿವೆ. ಕೆಲವು ನಗರಗಳು ಇತ್ತೀಚೆಗೆ ಹಿಂದುಳಿಯುತ್ತಿವೆ. ಅವುಗಳು ದಕ್ಷತೆಯಿಂದ ಕೆಲಸ ಮಾಡಿ ಉತ್ತಮ ರ್ಯಾಂಕಿಂಗ್ ಪಡೆದುಕೊಳ್ಳಬೇಕೆಂದು ಸಲಹೆ ಮಾಡಿದರು.
ರಾಜ್ಯ ಸರ್ಕಾರದ ಹಿರಿಯ ಅಧಿಕಾರಿ ಅಂಜುಮ್ ಫರ್ವೇಜ್ ಮಾತನಾಡಿ, ಕರ್ನಾಟಕ ರಾಜ್ಯ ಎಲ್ಲ ಕ್ಷೇತ್ರಗಳಲ್ಲೂ ಮುಂದಿದೆ. ಆದರೆ ಸ್ವಚ್ಛತೆ ವಿಷಯದಲ್ಲಿ ಹಿಂದೆ ಉಳಿದಿದೆ. ನಗರ ಸ್ಥಳೀಯ ಸಂಸ್ಥೆಗಳು ವೈಜ್ಞಾನಿಕ ಕಸ ವಿಲೇವಾರಿ ಕುರಿತು ಯಾವುದೇ ಯೋಜನೆಗಳನ್ನು ರೂಪಿಸಿದರೂ ಅದಕ್ಕೆ ರಾಜ್ಯ ಸರ್ಕಾರ ಸಂಪೂರ್ಣ ಬೆಂಬಲ, ಅನುದಾನ ನೀಡಲಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಸಾಕಷ್ಟು ಕಾಲಾವಕಾಶವಿದ್ದರೂ ಬೇರೆ ಬೇರೆ ದಾರಿಗಳನ್ನು ಹುಡುಕುವ ಪ್ರಯತ್ನದಲ್ಲಿ ಕಾಲಾಹರಣ ಮಾಡಲಾಗುತ್ತಿದೆ. ಅದರ ಬದಲಾಗಿ ಲಭ್ಯವಿರುವ ಜಾಗದಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಮಾಡುವಂತೆ ಹೇಳಿದರು.
ಉ.ಕ ಜಿಲ್ಲೆಗಳು ಕಸ ವಿಲೇವಾರಿಯಲ್ಲಿ ಬಹಳಷ್ಟು ಹಿಂದುಳಿದಿವೆ. ಒಳಚರಂಡಿ ಅವ್ಯವಸ್ಥೆ ಎದ್ದು ತೋರುತ್ತಿದೆ. 50 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಪಟ್ಟಣದಲ್ಲಿ ಒಳಚರಂಡಿ ಬದಲಾಗಿ ಪರ್ಯಾಯ ವ್ಯವಸ್ಥೆ ಮೂಲಕ ತ್ಯಾಜ್ಯ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಕರ್ನಾಟಕ ತ್ಯಾಜ್ಯ ವಿಲೇವಾರಿಯಲ್ಲಿ 4 ಸಾವಿರ ರ್ಯಾಂಕಿಂಗ್ನಿಂದ 5 ಸಾವಿರ ರ್ಯಾಂಕಿಂಗ್ ನೀಡಲಾಗಿದೆ ಎಂದು ತಿಳಿಸಿದರು.
ಹಿರಿಯ ಅಧಿಕಾರಿಗಳಾದ ಬಿ.ಎಸ್. ಶೇಖರಪ್ಪ, ರೋಹಿತ್ ಕಕ್ಕರ್ ಮತ್ತಿತರರು ಇದ್ದರು.