ಬೆಂಗಳೂರು, ಅ.6-ತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ಸಾಹಸ್ ಸಹಯೋಗದಲ್ಲಿ ಲಾಲ್ಬಾಗ್ನ್ನು ತ್ಯಾಜ್ಯ ಮುಕ್ತ ಉದ್ಯಾನವನವನ್ನಾಗಿ ರೂಪಿಸಲು ಬಾಷ್ ಮುಂದಾಗಿದೆ.
ಈ ನಿಟ್ಟಿನಲ್ಲಿ ಇಂದು ಲಾಲ್ಬಾಗ್ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಸ್ಮಾರ್ಟ್ ಪಾರ್ಕಿಂಗ್, ಕೆರೆಯಲ್ಲಿ ವಾಯುವಿಹಾರ ತಾಣ, ಸೋಲಾರ್ ಪೆನಲ್ಗಳು ಮತ್ತು ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಬಾಷ್ ಸಂಸ್ಥೆಗೆ ಹಸ್ತಾಂತರ ಮಾಡಲಾಯಿತು.
ತಂತ್ರಜ್ಞಾನ ಮತ್ತು ಸೇವಾ ಪೂರೈಕೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬಾಷ್ ಲಿಮಿಟೆಡ್ ಸುಸ್ಥಿರತೆ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವತ್ತ ದಾಪುಗಾಲು ಹಾಕಿದೆ.
ಬಾಷ್ ಸಂಸ್ಥೆಯು 2017 ರಿಂದ ಲಾಲ್ಬಾಗ್ ಜತೆ ತನ್ನ ಸಾಮಾಜಿಕ ಹೊಣೆಗಾರಿಕೆ ಉಪಕ್ರಮವನ್ನು ಕೈಗೊಳ್ಳುತ್ತಿದೆ. ಸ್ಮಾರ್ಟ್ ಪಾರ್ಕಿಂಗ್, ಕೆರೆಗಳ ಸುತ್ತಮುತ್ತ ವಾಯುವಿಹಾರ ಮಾರ್ಗ ನಿರ್ಮಾಣ, ತ್ಯಾಜ್ಯ ನಿರ್ವಹಣೆ ಸುಧಾರಣೆ ಮತ್ತು ಲಾಲ್ಬಾಗ್ನಲ್ಲಿ ಸೋಲಾರ್ ಪೆನೆಲ್ಗಳನ್ನು ಅಳವಡಿಸುವುದು ಸೇರಿದಂತೆ ಮತ್ತಿತರೆ ಕ್ರಮಗಳನ್ನು ಕೈಗೊಂಡಿದೆ.
ಬಾಷ್ ಲಾಲ್ಬಾಗ್ನ ಸುಸ್ಥಿರತೆಗಾಗಿ ಕ್ಲೀನ್ ಅಂಡ್ ಗ್ರೀನ್ ಎಂಬ ಅಭಿಯಾನವನ್ನು ಆಯೋಜಿಸಿದ್ದು, ಸ್ವಯಂಸೇವಾ ಸಂಸ್ಥೆಗಳು ಕೈಜೋಡಿಸಿದ್ದವು. ಸುಮಾರು 240 ಎಕರೆ ಪ್ರದೇಶದಲ್ಲಿರುವ ಲಾಲ್ಬಾಗ್ನಲ್ಲಿ ಹತ್ತು ಹಲವು ಬಗೆಯ ಅತ್ಯುತ್ತಮವಾದ ಮರಗಳು, ಗಾಜಿನ ಮನೆ ಮತ್ತು ಅತ್ಯಾಕರ್ಷಕವಾದ ಹೂದೋಟವಿದೆ. ಈ ಸೌಂದರ್ಯದ ಸೊಬಗನ್ನು ಮತ್ತಷ್ಟು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಬಾಷ್ ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆ ಜತೆ ಕೈಜೋಡಿಸಿದೆ.
ಬಾಷ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಬಾಷ್ ಇಂಡಿಯಾ ಗ್ರೂಪ್ನ ಅಧ್ಯಕ್ಷರಾಗಿರುವ ಸೌಮಿತ್ರಾ ಭಟ್ಟಾಚಾರ್ಯ ಅವರು ಮಾತನಾಡಿ, ನಮ್ಮ ವ್ಯವಹಾರದಲ್ಲಿ ಸಮಾಜ ಪ್ರಮುಖ ಪಾಲುದಾರನಾಗಿದೆ ಮತ್ತು ಸಮುದಾಯ ಮತ್ತು ಪರಿಸರ ಸಂರಕ್ಷಣೆ, ಸುಧಾರಣೆ ಮಾಡುವ ನಿಟ್ಟಿನಲ್ಲಿ ಬಾಷ್ ತನ್ನ ಬದ್ಧತೆಯನ್ನು ತೋರಿಸುತ್ತಾ ಬರುತ್ತಿದೆ. ನಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುತ್ತಾ ಬಂದಿದೆ. ಎಂದು ತಿಳಿಸಿದರು.