ರಾಯಚೂರು: ಜಿಲ್ಲೆಯಲ್ಲಿ ಸರ್ಕಾರಿ ಕೆಲಸ ಕೊಡಿಸುವುದಾಗಿ ಅಂಗನವಾಡಿ ಶಿಕ್ಷಕಿ ಎಂದು ಹೇಳಿಕೊಂಡು ಹತ್ತಾರು ಜನರಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.
ರಾಯಚೂರು ನಗರದ ಮಂಗಳವಾರ ಪೇಟೆ ನಿವಾಸಿ ಈರಮ್ಮ ಎಂಬುವಾಕೆ ನಾನು ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಅಂಗನವಾಡಿ ಕೇಂದ್ರ ಮೇಲಾಧಿಕಾರಿಗಳ ಪರಿಚಯವಿದ್ದು, ನಿಮಗೆ ಅಂಗನವಾಡಿ ಶಿಕ್ಷಕರ ಹುದ್ದೆ ಹಾಗೂ ಎಫ್ಡಿಸಿ ಪೋಸ್ಟ್ ಕೊಡಿಸುವುದಾಗಿ ನಂಬಿಸಿ, ಸುಮಾರು 14 ಜನರಿಂದ ಬರೋಬ್ಬರಿ 47 ಲಕ್ಷ ರೂಪಾಯಿಯನ್ನ ತೆಗೆದುಕೊಂಡಿದ್ದಾಳೆ ಎನ್ನಲಾಗಿದೆ.
ಸರ್ಕಾರಿ ಕೆಲಸ ಸಿಗುತ್ತೆ ಅಂತಾ ಈರಮ್ಮನ ಮಾತಿಗೆ ಮರುಳಾಗಿ 14 ಜನರಲ್ಲಿ ಕೆಲವರು ಐದು ಲಕ್ಷ, ಮೂರು, ಎರಡು ಲಕ್ಷ ಸೇರಿದಂತೆ ಹುದ್ದೆಯ ಅನುಸಾರವಾಗಿ ಹಣವನ್ನು ನೀಡಿದ್ದಾರೆ. ಆದ್ರೆ ಕಳೆದ ವರ್ಷದಿಂದ ಹಣ ಪಡೆದ ಈರಮ್ಮ ದಿನಗಳನ್ನು ಮುಂದೆ ಹಾಕುತ್ತಿದ್ದರಿಂದ ಅನುಮಾನಗೊಂಡು, ಹಣ ನೀಡಿದವರು ಈರಮ್ಮನ ಶೋಧ ಮಾಡಿದ್ರೆ ಆಕೆ ಸಿಕ್ಕಿರಲಿಲ್ಲ. ಇಂದು ನಗರದ ಸಿಯತಾಲಾಬ್ನಲ್ಲಿ ಸಿಕ್ಕಿಬಿದ್ದ ಆಕೆಯನ್ನು ಮನೆಯೊಂದರಲ್ಲಿ ಕೂಡಿ ಹಾಕಿ, ಹಣ ನೀಡು ಇಲ್ಲವೇ ಕೆಲಸ ಕೊಡಿಸು ಎಂದು ಒತ್ತಡ ಹೇರಿದ್ದಾರೆ. ಆಗಲೇ ಅವಳ ಆಸಲಿತ್ತು ಬಯಲಾಗಿದೆ.
ಆಕೆ, ಸಿರವಾರದಲ್ಲಿ ಕೆಲಸ ಮಾಡುತ್ತಿದ್ದ ಎಎಸ್ಐಯೊಬ್ಬರಿಗೆ 47 ಲಕ್ಷ ರೂಪಾಯಿಯನ್ನು ನೀಡಿದ್ದೇನೆ. ಆದ್ರೆ ಅವರು ನನಗೆ ಮೋಸ ಮಾಡಿದ್ದಾರೆ. ಹೀಗಾಗಿ ಅವರ ಮೇಲೆ ದೂರು ಕೊಟ್ಟಿದ್ದೆ. ಆಗ ಹೆಚ್ಚುವರಿ ಎಸ್ಪಿ ಸಮ್ಮುಖದಲ್ಲಿ 10 ಲಕ್ಷ ರೂಪಾಯಿ ಮರುಪಾವತಿ ಮಾಡಲಾಗಿದ್ದು, ಇನ್ನು 37 ಲಕ್ಷ ರೂಪಾಯಿ ನಗೆ ನೀಡಬೇಕಿದೆ. ಆದ್ರೆ ಹಣ ನೀಡುತ್ತಿಲ್ಲ ಎಂದು ಈರಮ್ಮ ಹಾರಿಕೆ ಉತ್ತರ ನೀಡುತ್ತಿದ್ದಾಳೆ.
ಇನ್ನು ಹಣ ನೀಡಿದವರು ನಮ್ಮ ಹಣ ನಮಗೆ ಕೊಡಿಸುವಂತೆ ಪೊಲೀಸರ ಮೊರೆ ಹೋಗಿದ್ದು, ಸದ್ಯ ಈರಮ್ಮನನ್ನು ರಾಯಚೂರು ಮಹಿಳಾ ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ