ನವದೆಹಲಿ: ರೆಪೋ ದರವನ್ನು ಯಥಾಸ್ಥಿತಿ ಕಾಯ್ದುಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಿರ್ಧರಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಅನಿಶ್ಚಿತತೆಯಿಂದ ಕೂಡಿದ್ದು, ನಿರಂತರವಾಗಿ ಹೆಚ್ಚಾಗುತ್ತಿದೆ. ಜಾಗತಿಕ ಆರ್ಥಿಕ ಪರಿಸ್ಥಿತಿಯಿಂದಾಗಿ ಅಭಿವೃದ್ಧಿ ಕುಂಠಿತವಾಗಿ ಹಣದುಬ್ಬರ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ದ್ವೈಮಾಸಿಕ ಆರ್ಥಿಕ ನೀತಿಯಲ್ಲಿ ರೆಪೋ ದರದ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದ್ದಾಗಿ ಆರ್ಬಿಐ ಸ್ಪಷ್ಟನೆ ನೀಡಿದೆ.
ಡಾಲರ್ ವಿರುದ್ಧ ರೂಪಾಯಿ ಮೌಲ್ಯ ದಾಖಲೆ ಕುಸಿತ ಕಂಡ ಹಿನ್ನೆಲೆ ಶುಕ್ರವಾರ ಮುಂಬೈ ಷೇರುಪೇಟೆಯಲ್ಲಿ ಭಾರಿ ತಲ್ಲಣ ಮೂಡಿಸಿತು. ಪರಿಣಾಮ ಮಧ್ಯಂತರ ವಹಿವಾಟಿನಲ್ಲಿ 34,202.22 ಅಂಕಗಳಿಗೆ ಕುಸಿದಿದ್ದ ಬಾಂಬೆ ಷೇರುಪೇಟೆ ಸೂಚ್ಯಂಕ (ಬಿಎಸ್ಇ-ಸೆನ್ಸೆಕ್ಸ್ ) ಕೊನೆಯಲ್ಲಿ ಸ್ವಲ್ಪ ಚೇತರಿಕೆ ಕಂಡು ಒಟ್ಟಾರೆ 792.17 ಅಂಕ ಮುಟ್ಟಿತು. ಇದು ಕಳೆದ ಆರು ತಿಂಗಳಲ್ಲೇ ಸೆನ್ಸೆಕ್ಸ್ ದಾಖಲಾದ ಕನಿಷ್ಠ ಅಂಕವಾಗಿದೆ.
ರಾಷ್ಟ್ರೀಯ ಸಂವೇದಿ ಸೂಚ್ಯಂಕ (ಎನ್ಎಸ್ಇ-ನಿಫ್ಟಿ) ಕೂಡ ಮಧ್ಯಾವಧಿ 10,261.90 ಅಂಕಗಳಿಗೆ ಕುಸಿದಿತ್ತು. ನಂತರ ಚೇತರಿಸಿಕೊಂಡು ಒಟ್ಟಾರೆ 282.80 ಅಂಕಗಳ ಕುಸಿತದೊಂದಿಗೆ 10,316.45 ಅಂಕ ದಾಖಲಾಗಿದೆ.