ಎನ್ ಆರ್ ಸಿ ವಿಚಾರ: ಬಾಂಗ್ಲಾ ಪ್ರಧಾನಿಗೆ ಪ್ರಧಾನಿ ಮೋದಿ ಕೊಟ್ಟ ಭರವಸೆಯೇನು…?

ಢಾಕಾ: ಅಸ್ಸಾಂ ನ ನೈಜ ಪೌರರು ಮತ್ತು ಅಕ್ರಮ ವಲಸಿಗರನ್ನು ಪತ್ತೆ ಮಾಡಲು ಎನ್ ಆರ್ ಸಿ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಆದರೆ ಎನ್ ಆರ್ ಸಿ ಪಟ್ಟಿಯಿಂದ ಕೈಬಿಟ್ಟ ಜನರನ್ನು ಗಡಿಪಾರು ಮಾಡುವುದಿಲ್ಲ ಎಂದು ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ ಎಂದು ಬಾಂಗ್ಲಾ ಉನ್ನತ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಜು.30 ರಂದು ಕೇಂದ್ರ ಸರ್ಕಾರ ಎನ್ ಆರ್ ಸಿ ಬಗ್ಗೆ ಮಾಹಿತಿ ನೀಡಿ, 40 ಲಕ್ಷ ಜನರನ್ನು ಎನ್ ಆರ್ ಸಿ ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಹೇಳಿತ್ತು. ಎನ್ ಆರ್ ಸಿ ಪಟ್ಟಿಯಿಂದ ಹೊರಗಿಡಲಾಗುವವರನ್ನು ಬಾಂಗ್ಲಾಗೆ ಗಡಿಪಾರು ಮಾಡುವುದಿಲ್ಲ ಎಂದು ಪ್ರಧಾನಿ ಮೋದಿಯೇ ನಮಗೆ ಭರವಸೆ ನೀಡಿದ್ದಾರೆ, ಬಾಂಗ್ಲಾದಲ್ಲಿ ವರ್ಷಾಂತ್ಯಕ್ಕೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ, ಈ ಸಂದರ್ಭದಲ್ಲಿ ಬಾಂಗ್ಲಾ ಅಕ್ರಮ ವಲಸಿಗರನ್ನು ಗಡಿಪಾರು ಮಾಡಿ ಅಸ್ಥಿರತೆ ಉಂಟುಮಾಡುವುದಿಲ್ಲ ಎಂದು ಭಾರತ ನಮಗೆ ನಿರಂತರ ಭರವಸೆ ನೀಡಿದೆ ಎಂದು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರ ರಾಜಕೀಯ ಸಲಹೆಗಾರರಾದ ಹೆಚ್ ಟಿ ಇಮಾಮ್ ಹೇಳಿದ್ದಾರೆ.

ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್, ಅಸ್ಸಾಂ ಎನ್ ಆರ್ ಸಿ ಪಟ್ಟಿಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರನ್ನು ಗುರುತಿಸಲಾಗುತ್ತದೆ. ನಂತರ ಅವರಿಗೆ ಸರ್ಕಾರಿ ಸೌಲಭ್ಯ, ಮತದಾನದ ಹಕ್ಕನ್ನು ಸ್ಥಗಿತಗೊಳಿಸಲಾಗುತ್ತದೆ. ಆ ಬಳಿಕ ಅವರನ್ನು ಗಡಿಪಾರು ಮಾಡಲಾಗುತ್ತದೆ ಎಂಬ ಹೇಳಿಕೆ ನೀಡಿದ್ದರು. ಈ ಹಿನ್ನಲೆಯಲ್ಲಿ ಎನ್ ಆರ್ ಸಿ ಯೋಜನೆ ಜಾರಿಯಾಗುತ್ತಿದ್ದಂತೆ ದೇಶಾದ್ಯಂತ ಭಾರೀ ಚರ್ಚೆಗಳು ಆರಂಭವಾಗಿದ್ದವು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ