ಅಣಕಿಸುವ ಅಮೆರಿಕಕ್ಕೆ ಭಾರತದಿಂದ ಡಬಲ್ ಶಾಕ್; ದೊಡ್ಡಣ್ಣನ ಇಷ್ಟಕ್ಕೆ ವಿರುದ್ಧವಾಗಿ ಇರಾನ್, ರಷ್ಯಾ ಜೊತೆ ಭಾರತದ ಒಪ್ಪಂದ

ನವದೆಹಲಿ: ಉಭಯ ರಾಷ್ಟ್ರಗಳ ತೆರಿಗೆ ನೀತಿ ವಿಷಯವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತವನ್ನು ಮೂದಲಿಸುತ್ತಲೇ ಬಂದಿದ್ದಾರೆ. ಅಮೆರಿಕ ಬಿಟ್ಟರೆ ಭಾರತಕ್ಕೆ ಗತಿ ಇಲ್ಲ ಎನ್ನುವ ರೀತಿಯಲ್ಲಿ ಮಾತನಾಡುತ್ತಿದ್ಧಾರೆ. ಇದು ಒಂದೆಡೆಯಾದರೆ, ರಷ್ಯಾ ಮತ್ತು ಇರಾನ್ ದೇಶಗಳೊಂದಿಗೆ ವ್ಯಾವಹಾರಿಕ ಸಂಬಂಧ ಇಟ್ಟುಕೊಂಡ ರಾಷ್ಟ್ರಗಳಿಗೆ ಪರಿಣಾಮ ನೆಟ್ಟಗಿರೊಲ್ಲ ಎಂದು ಪದೇ ಪದೇ ಎಚ್ಚರಿಕೆ ಕೊಡುತ್ತಲೇ ಬಂದಿದ್ದಾರೆ. ರಷ್ಯಾದಿಂದ ಎಸ್-400 ಮಿಸೈಲ್ ಸಿಸ್ಟಮ್ಸ್ ಹಾಗೂ ಇರಾನ್​ನಿಂದ ತೈಲ ಆಮದು ಮಾಡಿಕೊಳ್ಳಬೇಕೆಂದಿದ್ದ ಭಾರತಕ್ಕೂ ಅಮೆರಿಕ ನಿಷೇಧದ ಎಚ್ಚರಿಕೆಯನ್ನು ಆಗಾಗ ಕೊಡುತ್ತಲೇ ಇತ್ತು.
ಇದೀಗ ಈ ಎರಡೂ ವಿಚಾರದಲ್ಲಿ ಭಾರತವು ದೊಡ್ಡಣ್ಣನ ಲಕ್ಷ್ಮಣ ರೇಖೆಯನ್ನು ದಾಟಿದೆ. ಎಸ್-400 ಮಿಸೈಲ್ ಸಿಸ್ಟಮ್ ಖರೀದಿಗೆ ರಷ್ಯಾ ಜೊತೆ ಭಾರತ ಒಪ್ಪಂದ ಮಾಡಿಕೊಂಡಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ವಿವಿಧ ಒಪ್ಪಂದಗಳಿಗೆ ಸಹಿಹಾಕಿದ್ದಾರೆ.
ಇನ್ನೊಂದೆಡೆ, ಇರಾನ್ ದೇಶದೊಂದಿಗೆ ತೈಲ ವ್ಯವಹಾರ ಮುಂದುವರಿಸಲು ಭಾರತ ನಿರ್ಧರಿಸಿದೆ. ನವೆಂಬರ್​ನಲ್ಲಿ ಇರಾನ್​ನಿಂದ 90 ಲಕ್ಷ ಬ್ಯಾರೆಲ್ ತೈಲವನ್ನು ಆಮದು ಮಾಡಿಕೊಳ್ಳಲು ಭಾರತದ ತೈಲ ಕಂಪನಿಗಳು ಒಪ್ಪಂದ ಮಾಡಿಕೊಂಡಿವೆ.
ಇರಾನ್​ನಿಂದ ಯಾವ ದೇಶವೂ ತೈಲ ಆಮದು ಮಾಡಿಕೊಳ್ಳಬಾರದು. ನವೆಂಬರ್ 4ರೊಳಗೆ ಎಲ್ಲವೂ ಅಂತ್ಯವಾಗಬೇಕು ಎಂದು ಅಮೆರಿಕ ಅಧ್ಯಕ್ಷರು ಡೆಡ್​ಲೈನ್ ಫಿಕ್ಸ್ ಮಾಡಿದ್ದಾರೆ. ತನ್ನ ಮಾತನ್ನು ಧಿಕ್ಕರಿಸುವ ದೇಶಗಳಿಗೆ ಆರ್ಥಿಕ ನಿಷೇಧ ಹೇರುವುದಾಗಿ ಕಟ್ಟೆಚ್ಚರಿಕೆ ವಿಧಿಸಿದ್ದಾರೆ.
ಇದರ ಅರಿವಿದ್ದೂ ಭಾರತವು ಇರಾನ್ ತೈಲಕ್ಕೆ ಕೈಹಾಕಿದೆ. ಒಂದು ವೇಳೆ ಅಮೆರಿಕದಿಂದ ನಿಷೇಧ ಹೇರಲ್ಪಟ್ಟರೆ ಯೂರೋ ಕರೆನ್ಸಿ ಮೂಲಕ ವ್ಯವಹಾರ ನಡೆಸಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ, ರೂಪಾಯಿ ಲೆಕ್ಕದಲ್ಲೇ ಇರಾನ್ ಜೊತೆ ತೈಲ ವ್ಯವಹಾರ ನಡೆಸಲು ಭಾರತ ನಿರ್ಧರಿಸಿದೆ. ಭಾರತ ನೀಡುವ ರೂಪಾಯಿ ಕರೆನ್ಸಿಯನ್ನು ಇರಾನ್ ದೇಶ ಔಷಧ ಮತ್ತಿತರ ವಸ್ತುಗಳ ಖರೀದಿಗೆ ಬಳಕೆ ಮಾಡಲಿದೆಯಂತೆ. ಆದರೆ, ಕಳೆದ ಕೆಲ ವರ್ಷಗಳಿಂದ ಇರಾನ್​ನಿಂದ ಆಮದು ಮಾಡಿಕೊಂಡ ತೈಲದ ಪ್ರಮಾಣದಲ್ಲಿ ಮಾತ್ರ ಗಣನೀಯವಾಗಿ ಇಳಿಕೆಯಾಗಲಿದೆ.
ರಷ್ಯಾದೊಂದಿಗೆ ಕ್ಷಿಪಣಿ ವ್ಯವಸ್ಥೆಯ ಒಪ್ಪಂದ ಮಾಡಿಕೊಂಡ ಬೆಳವಣಿಗೆಯನ್ನು ಅಮೆರಿಕ ಸೂಕ್ಷ್ಮವಾಗಿ ಗಮನಿಸುತ್ತಿದೆ. ಇನ್ನೂ ಕೂಡ ಯಾವುದೇ ತೀಕ್ಷ್ಣ ಪ್ರತಿಕ್ರಿಯೆ ಕೊಟ್ಟಿಲ್ಲ. ತಾನು ದಿಗ್ಬಂಧನದ ಎಚ್ಚರಿಕೆ ಕೊಟ್ಟಿದ್ದು ಮಿತ್ರರನ್ನು ಬೆದರಿಸುವ ಉದ್ದೇಶದಿಂದಲ್ಲ. ರಷ್ಯಾ, ಇರಾನ್​ನಂತಹ ಅಪರಾಧ ರಾಷ್ಟ್ರಗಳಿಗೆ ಪಾಠ ಕಲಿಸುವ ಉದ್ದೇಶದಿಂದಷ್ಟೇ ಎಚ್ಚರಿಕೆ ಕೊಟ್ಟಿದ್ದೇವೆ ಎಂದು ಅಮೆರಿಕ ಹೇಳಿದೆ.
ಅದೇನೇ ಇದ್ದರೂ, ಅಮೆರಿಕದ ಇಷ್ಟಕ್ಕೆ ವಿರುದ್ಧವಾಗಿ ರಷ್ಯಾ ಮತ್ತು ಚೀನಾದೊಂದಿಗೆ ಭಾರತ ಒಪ್ಪಂದ ಮಾಡಿಕೊಳ್ಳುವ ದಿಟ್ಟತನ ತೋರಿದೆ. ಭಾರತದ ಜೊತೆ ಅಮೆರಿಕದ ಮುಂದಿನ ನಡೆ ಹೇಗಿರುತ್ತೆ ಎಂದು ಕಾದುನೋಡಬೇಕು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ