ಹಲವಾರು ಶಾಸಕರ ಜೊತೆ ಮಾಜಿ ಸಿಎಂ ಮಾತುಕತೆ

ಬೆಂಗಳೂರು,ಅ.5- ಕಾಂಗ್ರೆಸ್ ಸಚಿವರು ತಮ್ಮನ್ನು ಬಿಟ್ಟು ಪ್ರತ್ಯೇಕ ಉಪಹಾರ ಕೂಟ ನಡೆಸಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜಕೀಯ ಚಟುವಟಿಕೆಯಲ್ಲಿ ಬಿರುಸಾಗಿದ್ದು ಇಂದು ತಮ್ಮ ನಿವಾಸದಲ್ಲಿ ಹಲವಾರು ಶಾಸಕರ ಜೊತೆ ಮಾತುಕತೆ ನಡೆಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾದ ದಿನೇಶ್‍ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಶಾಸಕರಾದ ಡಾ.ಸುಧಾಕರ್, ವಿ.ತುಕಾರಾಂ, ಪಿ.ಟಿ.ಪರಮೇಶ್ವರ್ ನಾಯಕ್, ಎಚ್.ಎಂ.ರೇವಣ್ಣ ಮತ್ತಿತರರು ಇಂದು ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆಗೆ ದೆಹಲಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ಜೊತೆ ಚರ್ಚೆ ನಡೆಸುತ್ತಿರುವ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಸಿದ್ದರಾಮಯ್ಯನವರನ್ನು ಸಚಿವ ಸ್ಥಾನದ ಆಕಾಂಕ್ಷಿಗಳು ಭೇಟಿ ಮಾಡಿ ಒತ್ತಡ ಹೇರುತ್ತಿದ್ದಾರೆ.

ಡಸ್ಟ್ ಅಲರ್ಜಿಯಿಂದಾಗಿ ಕಳೆದೆರಡು ದಿನಗಳಿಂದ ಯಾವುದೇ ಶಾಸಕರನ್ನು, ಮುಖಂಡರನ್ನು ಭೇಟಿ ಮಾಡದೆ ಸಿದ್ದರಾಮಯ್ಯ ವಿಶ್ರಾಂತಿಯಲ್ಲಿದ್ದರು. ನಿನ್ನೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಕರೆದಿದ್ದ ಉಪಹಾರ ಕೂಟದಲ್ಲಿ ಸಿದ್ದರಾಮಯ್ಯ ಭಾಗಿಯಾಗಿರಲಿಲ್ಲ.
ಇದರ ಬೆನ್ನಲೇ ಸಚಿವ ಸಂಪುಟ ವಿಸ್ತರಣೆಯ ಬೆಳವಣಿಗೆಗಳು ತೀವ್ರಗೊಂಡವು. ಹಾಗಾಗಿ ಸಿದ್ದರಾಮಯ್ಯನವರು ಮತ್ತೆ ತಮ್ಮ ಚಟುವಟಿಕೆ ಆರಂಭಿಸಿದ್ದು, ಇಂದು ಶಾಸಕರ ಜೊತೆ ಸಮಾಲೋಚನೆ ನಡೆಸಿದ್ದಾರೆ.

ಇಂದು ಬೆಳಗ್ಗೆಯಿಂದಲೂ ಶಾಸಕರು ನಿರಂತರವಾಗಿ ಒಬ್ಬರಾದ ಮೇಲೆ ಒಬ್ಬರಂತೆ ಬಂದು ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕೂಡ ಬಂದು ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ