ಕೆಐಎಡಿಬಿ ಮುಖ್ಯಾಧಿಕಾರಿ ಮನೆಯಲ್ಲಿ 3 ಯಂತ್ರಗಳನ್ನು ಬಳಸಿ ಎಣಿಸಿದರೂ ಮುಗಿಯದ ಹಣ ಎಣಿಕೆ

ಬೆಂಗಳೂರು, ಅ.5- ಕರ್ನಾಟಕ ಕೈಗಾರಿಕ ಅಭಿವೃದ್ದಿ ನಿಗಮದ(ಕೆಐಎಡಿಬಿ) ಭೂಸ್ವಾಧೀನ ಮುಖ್ಯಾಧಿಕಾರಿಯ ಮನೆಯಲ್ಲಿ ಐದು ಕೋಟಿಗಿಂತಲೂ ಹೆಚ್ಚಿನ ನಗದು ಪತ್ತೆಯಾಗಿದ್ದು, ಮೂರು ಯಂತ್ರಗಳನ್ನು ಬಳಸಿ ಎಣಿಸಿದರೂ ಹಣ ಎಣಿಕೆ ಮುಗಿದಿಲ್ಲ.
ಎಸಿಬಿ ಅಧಿಕಾರಿಗಳು ವಿವಿಧ ತಂಡಗಳಲ್ಲಿ ಇಂದು ಮುಂಜಾನೆ ಇಬ್ಬರು ಹಿರಿಯ ಅಧಿಕಾರಿಗಳ ಮನೆ ಹಾಗೂ ಕಚೇರಿ ಸೇರಿ ಎಂಟು ಕಡೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಕೆಐಎಡಿಬಿಯ ಭೂಸ್ವಾಧಿನ ವಿಭಾಗದ ಮುಖ್ಯಾಧಿಕಾರಿ ಸಿ.ಆರ್.ಸ್ವಾಮಿ, ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ (ಬಿಡಿಎ) ಇಂಜಿನಿಯರಿಂಗ ಆಫೀಸರ್ ಎನ್.ಜಿ.ಗೌಡಯ್ಯ ಅವರ ಮೇಲೆ ಎಸಿಬಿ ಅಧಿಕಾರಿಗಳು ಐಜಿಪಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.
ಕೆಐಎಡಿಬಿಯಲ್ಲಿ ಮುಖ್ಯ ಅಭಿವೃದ್ಧಿ ಅಧಿಕಾರಿಯಾಗಿರುವ ಸ್ವಾಮಿ ಟಿ.ಆರ್. ಅವರು ಮಲ್ಲೇಶ್ವರಂನಲ್ಲಿರುವ ಪ್ರತಿಷ್ಠಿತ ಮಂತ್ರಿ ಗ್ರೀನ್ಸ್ ಅಪಾರ್ಟ್‍ಮೆಂಟ್‍ನ 14ನೆ ಮಹಡಿಯ ಫ್ಲಾಟ್‍ನಲ್ಲಿ ವಾಸಿಸುತ್ತಿದ್ದರು.

ಇಂದು ಬೆಳಗ್ಗೆ 6 ಗಂಟೆಗೆ ಎಸಿಬಿ ಅಧಿಕಾರಿಗಳು ಪರಿಶೀಲನೆಗಾಗಿ ತೆರಳಿದಾಗ ಸ್ವಾಮಿ ಅವರು ಬಾಗಿಲು ತೆಗೆಯದೆ ಸತಾಯಿಸಿದ್ದಾರೆ. ಕೊನೆಗೆ ಎಸಿಬಿ ಅಧಿಕಾರಿಗಳು ಬಾಗಿಲು ಒಡೆದು ಒಳನುಗ್ಗಿದ ಹಂತದಲ್ಲಿ ಹಣ, ಚಿನ್ನಾಭರಣ ಹಾಗೂ ಆಸ್ತಿಯ ದಾಖಲೆ ಪತ್ರಗಳನ್ನು ಬಟ್ಟೆಯಲ್ಲಿ ಕಟ್ಟಿ ಕಿಟಕಿಯಿಂದ ಹೊರಗಡೆ ಎಸೆದಿದ್ದಾರೆ.

ಆದರೆ ದಾಳಿಗೆ ಮುನ್ನ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದ ಎಸಿಬಿ ಅಧಿಕಾರಿಗಳು ಮನೆಯ ಸುತ್ತಮುತ್ತ ನಿಗಾವಹಿಸಿದ್ದು, ತಕ್ಷಣವೇ ಅದನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಮೂಲಗಳ ಪ್ರಕಾರ ಸುಮಾರು ಎರಡು ಕೋಟಿಯಷ್ಟು ನಗದನ್ನು ಸ್ವಾಮಿ ಅವರ ಮನೆಯಿಂದ ಹೊರಗೆಸೆಯಲಾಯಿತು ಎನ್ನಲಾಗಿದೆ. ಪ್ರಾಥಮಿಕ ವರದಿಯನ್ನು ಆಧರಿಸಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದು ಸುಮಾರು 5 ಕೋಟಿಗೂ ಹೆಚ್ಚಿನ ಹಣ ಸ್ವಾಮಿಯವರ ಮನೆಯಲ್ಲೇ ಲಭ್ಯವಾಗಿದೆ.
ಮಂತ್ರಿ ಅಪಾರ್ಟ್‍ಮೆಂಟ್, ಖನಿಜಭವನದಲ್ಲಿರುವ ಕೆಐಎಬಿಡಿ ಕಚೇರಿ ಸೇರಿದಂತೆ ಹಲವು ಕಡೆ ಸ್ವಾಮಿ ಅವರಿಗೆ ಸೇರಿದ ಸ್ನೇಹಿತರು, ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.

ಅಪಾರ ಪ್ರಮಾಣದ ಚಿನ್ನಾಭರಣ ಮತ್ತು ಚಿರಾಸ್ತಿಗಳ ದಾಖಲೆಗಳು ಈ ಸಂದರ್ಭದಲ್ಲಿ ಪತ್ತೆಯಾಗಿವೆ. ಲಭ್ಯವಾಗಿರುವ ನಗದನ್ನು ಮೂರು ಯಂತ್ರಗಳನ್ನು ಬಳಸಿ ಮಧ್ಯಾಹ್ನದವರೆಗು ಎಣಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಡಿಎ ಎಂಜಿನಿಯರಿಂಗ್ ಆಫೀಸರ್ ಆಗಿರುವ ಎನ್.ಜಿ.ಗೌಡಯ್ಯ ಅವರ ಬಸವೇಶ್ವರನಗರದಲ್ಲಿರುವ ಮನೆ ಹಾಗೂ ಬಿಡಿಎ ಕಚೇರಿ ಮೇಲೆ ದಾಳಿ ನಡೆದಿದೆ. ಏಕಕಾಲಕ್ಕೆ ಗೌಡಯ್ಯ ಅವರ ಹುಟ್ಟೂರಾದ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನಲ್ಲಿರುವ ನಿವಾಸದ ಮೇಲೆ ಹಾಗೂ ರಾಜಾಜಿನಗರದ ಸ್ನೇಹಿತರ ಮನೆ ಮೇಲೆ ದಾಳಿ ನಡೆಸಲಾಗಿದೆ. ಇವರ ಮನೆಯಲ್ಲೂ ಅಪಾರ ಪ್ರಮಾಣದ ಆಸ್ತಿ , ನಗದು ಹಾಗೂ ಚಿನ್ನಾಭರಣಗಳು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಭ್ರಷ್ಟಾಚಾರ ನಿಗ್ರಹ ದಳದ ಎಸ್‍ಪಿ ಸಂಜೀವ್ ಪಾಟೀಲ್, ಹಿರಿಯ ಅಧಿಕಾರಿಗಳಾದ ವಜೀರ್ ಅಲಿಖಾನ್, ರಮೇಶ್, ಶಿವಶಂಕರ್, ಬಾಲರಾಜ್ ಸೇರಿದಂತೆ ಹಲವಾರು ಅಧಿಕಾರಿಗಳು ದಾಳಿಯ ನೇತೃತ್ವ ವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ