ಸಂಪುಟ ವಿಸ್ತರಣೆ: ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧ: ಎಚ್.ಎಂ.ರೇವಣ್ಣ

ಬೆಂಗಳೂರು,ಅ.5-ಸಚಿವ ಸಂಪುಟ ವಿಸ್ತರಣೆ ವೇಳೆ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿ ಸಮ್ಮಿಶ್ರ ಸರ್ಕಾರ ಯಶಸ್ವಿಯಾಗಿ ನಡೆಯಲು ಸಹಕರಿಸಬೇಕೆಂದು ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಮನವಿ ಮಾಡಿದ್ದಾರೆ.

ಸಚಿವರಾಗಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಹಾಗೆಂದ ಮಾತ್ರಕ್ಕೆ ಎಲ್ಲರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಅನಗತ್ಯವಾಗಿ ಪಕ್ಷದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡಬಾರದು. ಸಮ್ಮಿಶ್ರ ಸರ್ಕಾರ ಸುಭದ್ರವಾಗಿ ನಡೆಯಬೇಕಾದರೆ ಕೆಲವು ಸಂದರ್ಭಗಳಲ್ಲಿ ನಾವು ತ್ಯಾಗ ಮಾಡುವುದು ಅನಿವಾರ್ಯವಾಗಿರುತ್ತದೆ ಎಂದು ಸೂಚ್ಯವಾಗಿ ಹೇಳಿದರು.

ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಂಪುಟ ವಿಸ್ತರಣೆ ವೇಳೆ ವಿಧಾನಪರಿಷತ್‍ನ ಹಿರಿಯ ಸದಸ್ಯರೊಬ್ಬರಿಗೆ ಮಂತ್ರಿ ಸ್ಥಾನ ನೀಡಬೇಕೆಂಬ ಬೇಡಿಕೆ ಕೇಳಿಬಂದಿದೆ. ಅಂತಿಮವಾಗಿ ಹೈಕಮಾಂಡ್ ನಾಯಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಬೇಕೆಂದು ಸಲಹೆ ಮಾಡಿದರು.
ಕೇವಲ ಮೇಜು ಕುಟ್ಟಿ ಗಲಾಟೆ ಮಾಡುವವರಿಗೆ ಮಂತ್ರಿ ಸ್ಥಾನ ನೀಡುವುದು ಸರಿಯಲ್ಲ. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ನನ್ನ ಸಮುದಾಯಕ್ಕೆ ಕನಿಷ್ಠ ಪಕ್ಷ ಎರಡು ಸ್ಥಾನಗಳನ್ನಾದರೂ ನೀಡಬೇಕು. ಎಂಟಿಬಿ ನಾಗರಾಜ್ ಹೆಸರು ಕೂಡ ಮುಂಚೂಣಿಯಲ್ಲಿದೆ. ಕುರುಬ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಲಿ ಎಂದು ಮನವಿ ಮಾಡಿದರು.

ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ಸಚಿವ ಸ್ಥಾನ ಸಿಗದವರು ಪಕ್ಷ ಬಿಡುತ್ತಾರೆ ಎಂಬುದು ಆಧಾರರಹಿತ ಆರೋಪ. ಯಾರೊಬ್ಬರು ಪಕ್ಷ ಬಿಟ್ಟು ಬೇರೆ ಪಕ್ಷಗಳತ್ತ ಮುಖ ಮಾಡುವುದಿಲ್ಲ. ಕೇವಲ ಇದು ಊಹಾಪೆÇೀಹ ಎಂದು ಸ್ಪಷ್ಟಪಡಿಸಿದರು.
ಅಧಿಕಾರ ಸ್ವೀಕರಿಸಿದ ಕೆಲವೆ ದಿನಗಳಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರು ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುತ್ತಿದ್ದಾರೆ. ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲ. ಗೊಂದಲ ಇರುವುದು ಮಾಧ್ಯಮಗಳಲ್ಲಿ ಮಾತ್ರ ಎಂದು ಹೇಳಿದರು.

ಯಾವುದೇ ಕಾರಣಕ್ಕೂ ಈ ಬಾರಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಬರುವುದಿಲ್ಲ. ಪ್ರಧಾನಿ ನರೇಂದ್ರಮೋದಿ ಸರ್ಕಾರದ ಬಗ್ಗೆ ಜನರು ಭ್ರಮನಿರಸನಗೊಂಡಿದ್ದಾರೆ. ಜನರಿಗೆ ನೀಡಿದ ಒಂದೇ ಒಂದು ಭರವಸೆಗಳನ್ನು ಸಹ ಈಡೇರಿಸಿಲ್ಲ. ಈ ಬಾರಿ ಕಾಂಗ್ರೆಸ್ ನೇತೃತ್ವದ ಯುಪಿಎ 300ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದು ಅಧಿಕಾರ ಹಿಡಿಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ನಾಳೆ ಅಹಲ್ಯಾ ಬಾಯಿ ಜನ್ಮ ದಿನಾಚರಣೆ:
ಕುರುಬ ಸಮುದಾಯದ ಮಹಿಳಾ ಸಮಾಜ ಸುಧಾರಕಿ ಅಹಲ್ಯಾ ಬಾಯಿ ಅವರ ಜನ್ಮ ದಿನಾಚರಣೆಯನ್ನು ನಾಳೆ ದೇವರಾಜು ಅರಸು ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಸಮಾವೇಶಕ್ಕೆ ರಾಜ್ಯದ ನಾನಾ ಭಾಗಗಳಿಂದ ಆಗಮಿಸಲಿದ್ದಾರೆ.
ಕಾಗಿನೆಲೆ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಈಶ್ವರಾನಂದ ಮಹಾಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ಸಚಿವರಾದ ಬಂಡೆಪ್ಪ ಕಾಶ್ಯಂಪುರ್, ಶಾಸಕರಾದ ಕೆ.ಎಸ್.ಈಶ್ವರಪ್ಪ, ಭೆರತಿ ಬಸವರಾಜು, ಭೆರತಿ ಸುರೇಶ್, ಎಂಟಿಬಿ ನಾಗರಾಜ್ ಮತ್ತಿತರರು ಭಾಗವಹಿಸಲಿದ್ದಾರೆ.
ಕರ್ನಾಟಕ ವಿವಿ ಕುಲಪತಿ ಡಾ.ಮಲ್ಲಿಕಾ ಗಂಟಿ, ಅಕ್ಕಮಹಾದೇವಿ ಮಹಿಳಾ ವಿವಿ ಕುಲಸಚಿವೆ ಡಾ.ಸುನಂದಮ್ಮ, ಡಾ.ಭಾಗ್ಯಲಕ್ಷ್ಮಿ ಅವರು ವಿಷಯ ಮಂಡನೆ ಮಾಡಲಿದ್ದಾರೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ