ನ.1 ರೊಳಗೆ ಎಲ್ಲಾ ಕಡೆ ಕನ್ನಡ ನಾಮಫಲಕ ಕಡ್ಡಾಯ

ಬೆಂಗಳೂರು, ಅ.5-ಕರ್ನಾಟಕದಲ್ಲಿ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಜಾರಿಗೆ ತರಲು ಹಾಗೂ ಕರ್ನಾಟಕದಲ್ಲಿ ಎಲ್ಲಾ ಕಡೆ ಕನ್ನಡ ನಾಮಫಲಕವನ್ನು ಕಡ್ಡಾಯವಾಗಿ ನ.1 ರೊಳಗೆ ಹಾಕಬೇಕು, ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಕರ್ನಾಟಕ ಪರ ಸಂಘಟನೆಗಳ ಒಕ್ಕೂಟ ಎಚ್ಚರಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ಜೆ.ಪಿ.ವಿಶ್ವನಾಥ್, ಮಾಲ್‍ಗಳು, ಆಸ್ಪತ್ರೆಗಳು, ಶಾಲೆಗಳು, ಬ್ಯಾಂಕ್‍ಗಳು, ಚಿತ್ರಮಂದಿರಗಳು, ರೈಲ್ವೆ ನಿಲ್ದಾಣಗಳು, ಮೆಟ್ರೋ, ವಿಮಾನ ನಿಲ್ದಾಣ ಪ್ರತಿಯೊಂದು ಅಂಗಡಿ, ಮುಂಗಟ್ಟುಗಳಲ್ಲಿ , ಸಾರ್ವಜನಿಕ ಸ್ಥಳಗಳಲ್ಲಿ , ಸರ್ಕಾರೇತರ ಸಂಸ್ಥೆಗಳಲ್ಲಿ, ಕಾರ್ಖಾನೆಗಳು ಸೇರಿದಂತೆ ಇನ್ನಿತರೆಡೆ ಕನ್ನಡ ನಾಮಫಲಕಗಳನ್ನು ಹಾಕಲೇಬೇಕು ಎಂದು ಒತ್ತಾಯಿಸಿದರು.

ಕರ್ನಾಟಕದಲ್ಲಿ ಪ್ರತಿಯೊಬ್ಬರು ಕನ್ನಡವನ್ನು ಕಲಿಯಬೇಕು, ಬಳಸಬೇಕು, ಬೆಳೆಸಬೇಕು. ಕರ್ನಾಟಕದಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಆಡಳಿತ ಭಾಷೆಯನ್ನಾಗಿ ಬಳಸಬೇಕು ಎಂದರು.
ಪ್ರತಿಯೊಂದು ಪತ್ರ ವ್ಯವಹಾರವೂ ಕನ್ನಡದಲ್ಲೇ ಮಾಡಬೇಕು. ಸರ್ಕಾರಿ ಅಥವಾ ಸರ್ಕಾರೇತರ ಸಂಸ್ಥೆಗಳಲ್ಲಿ ಇನ್ನಿತರ ಯಾವುದೇ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಹೆಚ್ಚು ಉದ್ಯೋಗಗಳನ್ನು ನೀಡಬೇಕು.
ಈ ಎಲ್ಲಾ ಬೇಡಿಕೆಗಳು ನ.1 ರೊಳಗೆ ಈಡೇರದಿದ್ದರೆ ರಾಜ್ಯಮಟ್ಟದ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ