ಉಪಮಹಾಪೌರರ ಕುರ್ಚಿಯಲ್ಲಿ ಕೂರುವ ಮುನ್ನವೇ ವಿಧಿವಶರಾದ ಉಪಮೇಯರ್ ರಮಿಳಾ

ಬೆಂಗಳೂರು, ಅ.5- ಎಲ್ಲ ನಿರೀಕ್ಷೆಗಳನ್ನು ಮೀರಿ ಅನಾಯಾಸವಾಗಿ ಉಪಮೇಯರ್ ಹುದ್ದೆ ಅಲಂಕರಿಸಿದ್ದ ರಮಿಳಾ ಉಮಾಶಂಕರ್ ಅವರು ಉಪಮಹಾಪೌರರ ಕುರ್ಚಿಯಲ್ಲಿ ಕೂರುವ ಮುನ್ನವೇ ವಿಧಿವಶರಾಗಿರುವುದು ವಿಪರ್ಯಾಸವೇ ಸರಿ.
ಕಳೆದ ಸೆ.28ರಂದು ನಡೆದ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವೆ ಪೈಪೆÇೀಟಿ ಏರ್ಪಟ್ಟಿತ್ತು.

ಕಾಂಗ್ರೆಸ್‍ನಲ್ಲಿ ಮೇಯರ್ ಗಾದಿಗೆ ಪೈಪೆÇೀಟಿ ಉಂಟಾಗಿದ್ದರೆ, ಜೆಡಿಎಸ್‍ನಲ್ಲಿ ಉಪಮೇಯರ್ ಪಟ್ಟ ಅಲಂಕರಿಸಲು ಸದಸ್ಯರಾದ ಇಮ್ರಾನ್ ಪಾಷ, ಭದ್ರೇಗೌಡ, ದೇವದಾಸ್, ರಾಜಶೇಖರ್, ಮಂಜುಳಾ ನಾರಾಯಣಸ್ವಾಮಿ ಮತ್ತಿತರರ ನಡುವೆ ಬಿಗ್‍ಫೈಟ್ ಏರ್ಪಟ್ಟಿತ್ತು.
ಆದರೆ, ಜೆಡಿಎಸ್ ವರಿಷ್ಠರು ರಮಿಳಾ ಉಮಾಶಂಕರ್ ಅವರನ್ನು ಉಪಮೇಯರ್ ಅಭ್ಯರ್ಥಿಯನ್ನಾಗಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ರಮಿಳಾ ಅವರ ಆಯ್ಕೆಯನ್ನು ವಿರೋಧಿಸಿ ಕೆಲ ಸದಸ್ಯರು ಪಕ್ಷವನ್ನೇ ತೊರೆಯುವ ತೀರ್ಮಾನಕ್ಕೆ ಬಂದರೂ ರಮಿಳಾ ಅವರನ್ನೇ ಉಪಮೇಯರ್‍ರನ್ನಾಗಿಸಲಾಗಿತ್ತು.

ಉಪಮೇಯರ್ ಆಗಿ ಅಧಿಕಾರ ವಹಿಸಿಕೊಂಡ ರಮಿಳಾ ಉಮಾಶಂಕರ್ ಅವರು ಇತ್ತೀಚೆಗಷ್ಟೆ ಕಚೇರಿ ಪೂಜೆ ನೆರವೇರಿಸಿದ್ದರು. ಈ ತಿಂಗಳಾಂತ್ಯದಲ್ಲಿ ನಡೆಯುವ ಮಾಸಿಕ ಸಭೆಯಲ್ಲಿ ಉಪಮೇಯರ್ ಕುರ್ಚಿ ಮೇಲೆ ಆಸೀನರಾಗಬೇಕಿತ್ತು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಅನಾಯಾಸವಾಗಿ ಉಪಮಹಾಪೌರ ಹುದ್ದೆ ಅಲಂಕರಿಸಿದ್ದ ರಮಿಳಾ ಅವರು ಕೌನ್ಸಿಲ್‍ನಲ್ಲಿರುವ ತಮ್ಮ ಕುರ್ಚಿಯಲ್ಲಿ ಆಸೀನರಾಗುವ ಮುನ್ನ ಸಾವನ್ನಪ್ಪಿರುವುದು ವಿಧಿ ವಿಪರ್ಯಾಸವೇ ಸರಿ.

ಪಾಲಿಕೆ ಇತಿಹಾಸದಲ್ಲಿ ಉಪಮೇಯರ್ ಸ್ಥಾನ ಅಲಂಕರಿಸಿದ್ದಾಗಲೇ ಮೃತಪಟ್ಟವರಲ್ಲಿ ರಮಿಳಾ ಉಮಾಶಂಕರ್ ಎರಡನೆಯವರಾಗಿದ್ದಾರೆ. ಹಲವಾರು ವರ್ಷಗಳ ಹಿಂದೆ ಉಪಮೇಯರ್ ಸ್ಥಾನ ಅಲಂಕರಿಸಿದ್ದ ವ್ಯಕ್ತಿಯೊಬ್ಬರು ನಿಧನರಾಗಿದ್ದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆದಿತ್ತು. ಹೀಗಾಗಿ ಮೇಯರ್ ಅವರದ್ದು 52ನೆ ಅವಧಿಯಾಗಿದ್ದರೆ, ಉಪಮೇಯರ್ ಅವರದ್ದು 53ನೆ ಅವಧಿಯಾಗಿದೆ.
ಇದೀಗ ರಮಿಳಾ ಉಮಾಶಂಕರ್ ಅವರ ನಿಧನದಿಂದ ಮತ್ತೊಮ್ಮೆ 54ನೆ ಅವಧಿಯ ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ