ಬೆಂಗಳೂರು, ಅ.5-ಯಾವುದೇ ನೆಪಹೇಳದೆ ನಗರದ ರಸ್ತೆಗುಂಡಿಗಳನ್ನು ಪ್ರಾಮಾಣಿಕವಾಗಿ ಮುಚ್ಚಿಸಿ ಎಂದು ಹೈಕೋರ್ಟ್ ಮತ್ತೆ ಬಿಬಿಎಂಪಿಗೆ ಚಾಟಿ ಬೀಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆಗುಂಡಿ ಮುಚ್ಚುವ ವಿಚಾರ ಕುರಿತು ಇಂದು ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಪಿಐಎಲ್ ವಿಚಾರಣೆ ನಡೆಸಿದ ನ್ಯಾಯಾಧೀಶರು ದಸರಾ ವೇಳೆ ಸಂಚಾರದಟ್ಟಣೆ ಕಡಿಮೆ ಇರಲಿದೆ. ಆಗ ಗುಂಡಿ ಮುಚ್ಚೋಣ ಎಂದು ಕಾಯದೆ, ಯಾವುದೇ ಸಬೂಬು ಹೇಳದೆ ತಕ್ಷಣವೇ ಗುಂಡಿ ಮುಚ್ಚುವ ಕಾರ್ಯ ಪೂರ್ಣಗೊಳಿಸಿ ಎಂದು ತಾಕೀತು ಮಾಡಿದರು.
ಬಿಬಿಎಂಪಿ ಪರ ವಕೀಲ ವಿ.ಶ್ರೀನಿಧಿ ಅವರು ನಗರದ ಗುಂಡಿ ಮುಚ್ಚಲು ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಆರಂಭಿಸಿದ್ದೇವೆ. ಎರಡು ಹಾಟ್ ಮಿಕ್ಸ್ ಪ್ಲಾಂಟ್ ಆರಂಭಿಸಲು ಟೆಂಡರ್ ಕರೆದಿದ್ದೇವೆ. ಐದು ವರ್ಷ ಪಾಲಿಕೆಯೇ ರಸ್ತೆಗಳ ನಿರ್ವಹಣೆ ಮಾಡಲಿದೆ ಎಂದು ತಿಳಿಸಿದರು.
ಇದಕ್ಕೆ ನ್ಯಾಯಾಧೀಶರು ಯಾವುದೇ ಸಬೂಬು ಹೇಳಬೇಡಿ. ದಸರಾ ಎಂದು ಕಾಯಬೇಡಿ. ತಕ್ಷಣವೇ ಗುಂಡಿ ಮುಚ್ಚಿಸಿ. ಬಿಬಿಎಂಪಿ ಆ್ಯಪ್ನಲ್ಲಿ ಬರುವ ದೂರುಗಳಿಗೆ ಕೂಡಲೇ ಸ್ಪಂದಿಸಿ ಎಂದು ಸೂಚನೆ ನೀಡಿ ವಿಚಾರಣೆಯನ್ನು ಅಕ್ಟೋಬರ್ 23ಕ್ಕೆ ಮುಂದೂಡಿದರು.