ಹೊಟ್ಟೆಯೊಳಗಿದ್ದ ಬೀಜ ಮೊಳೆತು ಮರವಾಗಿದ್ದರಿಂದ ಪತ್ತೆಯಾಯ್ತು 40 ವರ್ಷದ ಹಿಂದೆ ಹತ್ಯೆಯಾದವನ ದೇಹ

ಸಿಪ್ರಸ್: 40 ವರ್ಷಗಳ ಹಿಂದೆ ಹತ್ಯೆಯಾದವನವ್ಯಕ್ತಿಯ ದೇಹ ಆತನ ಹೊಟ್ಟೆಯಲ್ಲಿದ್ದ ಅಂಜೂರದ ಬೀಜ ಮರವಾಗಿ ಬೆಳೆದ ನಂತರ ಪತ್ತೆಯಾದ ವಿಚಿತ್ರ ಘಟನೆ ಮೆಡಿಟರೇನಿಯನ್ ದ್ವೀಪ ಸಿಪ್ರಸ್‌ನಲ್ಲಿ ನಡೆದಿದೆ.
2,000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ 1974 ರಲ್ಲಿ ನಡೆದ ಗ್ರೀಕ್ ಮತ್ತು ಟರ್ಕಿಷ್ ಸೈಪ್ರಿಯೋಟ್ ನಡುವಿನ ಸಂಘರ್ಷದ ಸಂದರ್ಭದಲ್ಲಿ ಅಹ್ಮೆಟ್ ಹರ್ಗುನ್ ಕೊಲ್ಲಲ್ಪಟ್ಟಿದ್ದ. ನಾಲ್ಕು ದಶಕಗಳಿಂದ ಆತನ ದೇಹ ಪತ್ತೆಯಾಗಿರಲಿಲ್ಲ.
2011ರಲ್ಲಿ ಸಂಶೋಧಕರು ಈ ಮರವನ್ನು ಪತ್ತೆ ಹಚ್ಚಿದ್ದರು. ಪರ್ವತ ಪ್ರದೇಶದಲ್ಲಿ ಅದರಲ್ಲೂ ಗುಹೆಯಲ್ಲಿ ಈ ಮರ ಹೇಗೆ ಬೆಳೆಯಿತು ಅಚ್ಚರಿಗೊಂಡ ಸಂಶೋಧಕರು, ಮರದ ಸುತ್ತಲೂ ಅಗೆದು ನೋಡಿದಾಗ ಮಾನವ ದೇಹದ ಅವಶೇಷ ಕಂಡು ಬೆಚ್ಚಿಬಿದ್ದಿದ್ದಾರೆ. ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಮೂರು ದೇಹಗಳ ಅವಶೇಷ ದೊರೆಯಿತು.
ಅಹ್ಮೆಟ್ ಹರ್ಗುನ್‌ ಮತ್ತವನ ಇಬ್ಬರು ಸಹಚರರು ಸಂಘರ್ಷದ ಸಮಯದಲ್ಲಿ ಗುಹೆಯೊಂದರಲ್ಲಿ ಅಡಗಿ ಕುಳಿತಿದ್ದರು. ಗ್ರೀಕ್ ಸೈಪ್ರಿಯೋಟ್‌ಗಳು ಆ ಗುಹೆಯ ಮೇಲೆ ಡೈನಮೇಟ್ ಎಸೆದಿದ್ದರಿಂದ ಮೂವರು ಸಹ ಸಾವನ್ನಪ್ಪಿದ್ದರು. ಆ ಡೈನಮೇಟ್‌ನಿಂದ ಗುಹೆಗೆ ರಂಧ್ರವಾಗಿ ಸೂರ್ಯನ ಬೆಳಕು ಒಳಹೋಗುವಂತಾಗಿತ್ತು. ಸತ್ತು ಕೊಳೆಯತೊಡಗಿದ್ದ ಹರ್ಗುನ್‌ ಹೊಟ್ಟೆಯಲ್ಲಿ ಅಂಜೂರದ ಬೀಜವಿದ್ದು , ಸೂರ್ಯನ ಬೆಳಕು, ನೀರು ಸಿಕ್ಕಿದ್ದರಿಂದ ಮೊಳೆತು ಗಿಡವಾಗಿ ಮರವಾಗಿದೆ.
ನಾವು 4,000 ಜನಸಂಖ್ಯೆಯುಳ್ಳ ಹಳ್ಳಿಯೊಂದರಲ್ಲಿ ವಾಸವಾಗಿದ್ದೆವು. ನಮ್ಮ ಹಳ್ಳಿಯ ಅರ್ಧಭಾಗ ಗ್ರೀಕ್‌ಗೆ ಸೇರಿದ್ದರೆ ಮತ್ತರ್ಧ ಭಾಗ ಟರ್ಕಿಷ್‌ಗೆ ಸೇರಿತ್ತು. 1974ರಲ್ಲಿ ಎರಡು ದೇಶಗಳ ನಡುವೆ ಸಂಘರ್ಷ ಆರಂಭವಾದಾಗ ಸಹೋದರ ಟರ್ಕಿಷ್ ರೆಸಿಸ್ಟೆನ್ಸ್ ಸಂಸ್ಥೆಗೆ ಸೇರಿಕೊಂಡ. ಜೂನ್ 10ರಂದು ಗ್ರೀಕರು ಆತನನ್ನು ಕರೆದೊಯ್ದರು. ಅಲ್ಲಿಂದಾತ ಪತ್ತೆಯಾಗಿರಲಿಲ್ಲ. ಬರೋಬ್ಬರಿ 4 ದಶಕಗಳ ಕಾಲ ನಾವು ಆತನನ್ನು ಹುಡುಕಾಡಿದ್ದೆವು. ಮತ್ತೀಗ ಅಂಜೂರದ ಮರ ಬೆಳೆದು ನಮ್ಮ ಸಹೋದರನ ಅಂತ್ಯದ ಸತ್ಯದ ಮೇಲೆ ಬೆಳಕು ಚೆಲ್ಲಿತು ಎಂದು ಅಹ್ಮೆಟ್ ಹರ್ಗುನ್‌ ಸಹೋದರಿ ಮುನುರ್(87) ಕಣ್ಣು ತುಂಬಿಕೊಂಡು ಹೇಳುತ್ತಾಳೆ.
ಸಾಯುವ ದಿನ ನನ್ನ ಸಹೋದರ ಅಂಜೂರ ತಿಂದಿರಬೇಕು ಎಂದು ಮುನಾರ್ ಹೇಳಿದ್ದಾಳೆ.
ಮೃತನ ಡಿಎನ್ಎ ಕುಟುಂಬ ಸದಸ್ಯರಿಗೆ ಹೋಲಿಕೆಯಾಗಿದ್ದು, ತನ್ನ ಸಹೋದರನನ್ನು ಹುಡುಕಿಕೊಟ್ಟ ಮರಕ್ಕೆ ಮುನಾರ್ ಕೃತಜ್ಞತೆ ಸಲ್ಲಿಸಿದ್ದಾಳೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ