ನವದೆಹಲಿ, ಅ.5-ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ಸಂಪುಟ ವಿಸ್ತರಣೆಯಾಗಬೇಕಿದೆ. ಕಾಂಗ್ರೆಸ್‍ನ ನಿರ್ಧಾರದ ಬಳಿಕ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ಭೇಟಿಗೆ ಪ್ರಯತ್ನಿಸಲಾಗುವುದು. ರಾಹುಲ್‍ಗಾಂಧಿಯವರ ಭೇಟಿಗೆ ಅವಕಾಶ ಸಿಕ್ಕರೆ ಭೇಟಿ ಮಾಡಿ ಸಂಪುಟ ವಿಸ್ತರಣೆ ಕುರಿತಾಗಿ ಚರ್ಚಿಸಲಿದ್ದೇನೆ ಎಂದು ಹೇಳಿದರು.
ಕೇಂದ್ರ ಗೃಹ ಮತ್ತು ಸಾರಿಗೆ ಸಚಿವರನ್ನು ಭೇಟಿ ಮಾಡಿ ರಾಜ್ಯದಲ್ಲಿನ ಅತಿವೃಷ್ಟಿ ಮತ್ತು ಅನಾವೃಷ್ಟಿ ಸಮಸ್ಯೆ ಹಾಗೂ ಪರಿಹಾರದ ಬಗ್ಗೆ ಚರ್ಚಿಸಿದ್ದೇವೆ. ವಿಶೇಷವಾಗಿ ಕಾಫಿ ಬೆಳೆಗಾರರ ಸಂಕಷ್ಟಕ್ಕೆ ನೆರವು ನೀಡಲು ಮನವಿ ಮಾಡಿದ್ದೇವೆ. ನಮ್ಮ ಬೇಡಿಕೆಗಳಿಗೆ ಸ್ಪಂದಿಸಿದ ಸಚಿವರು ಅಗತ್ಯ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ನಿಯೋಗದಲ್ಲಿ ದೇವೇಗೌಡರು ಭಾಗವಹಿಸಿದ್ದು, ಸಹಾಯವಾಗಿದೆ ಎಂದು ಹೇಳಿದರು.
ಋಣ ಮುಕ್ತ ಕಾಯ್ದೆ ಕುರಿತಂತೆ ಕೇಂದ್ರ ಗೃಹ ಸಚಿವ ರಾಜ್‍ನಾಥ್‍ಸಿಂಗ್ ಅವರು ಕಾನೂನು ಇಲಾಖೆಯ ಸ್ಪಷ್ಟೀಕರಣ ಕೇಳಿದ್ದರು. ಅದನ್ನು ಕೊಟ್ಟಿದ್ದೇವೆ. ಈ ಹಿಂದೆ ಈ ವಿಚಾರವನ್ನು ರಾಷ್ಟ್ರಪತಿಯವರ ಗಮನಕ್ಕೂ ತರಲಾಗಿತ್ತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರೈತರು ಖಾಸಗಿ ಸಾಲ ಪಡೆದು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು. ಸರ್ಕಾರ ದೊಡ್ಡ ಪ್ರಮಾಣದಲ್ಲಿ ಯೋಜನೆ ಜಾರಿಗೆ ತಂದಿದೆ. ರೈತರು ಆತ್ಮಹತ್ಯೆ ಮಾಡಿಕೊಂಡು ತಮ್ಮ ಕುಟುಂಬವನ್ನು ಬೀದಿ ಪಾಲು ಮಾಡಬಾರದು ಎಂದು ತಿಳಿಸಿದರು.
ಸಾಲ ಮನ್ನಾ ಕುರಿತಂತೆ ರೈತರಿಂದ ಮಾಹಿತಿ ಕೋರಲಾಗಿದೆ. ಸಾಲ ಮನ್ನಾ ಯೋಜನೆಗೆ ಯಾವುದೇ ಅವಧಿ ನಿಗದಿ ಮಾಡಿಲ್ಲ. ಅರ್ಜಿ ಕೊಡುತ್ತಿದ್ದೇವೆ. ಕಾಲಹರಣ ಮಾಡದೆ ರೈತರು ನಾಡಕಚೇರಿಗೆ ತೆರಳಿ ಸರಿಯಾದ ಮಾಹಿತಿ ನೀಡಿ. ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಸರ್ಕಾರದಿಂದ ಹಣ ಜಮೆಯಾಗಲಿದೆ.
ರೈತರಿಂದ ಮಾಹಿತಿ ಕೇಳಿರುವುದಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಸರಿಯಾದ ಮಾಹಿತಿ ನೀಡಿ ಮಧ್ಯವರ್ತಿಗಳನ್ನು ತಪ್ಪಿಸಲು ಸರ್ಕಾರ ಮಾಹಿತಿ ಕೇಳುತ್ತಿದೆ ಎಂದು ಸ್ಪಷ್ಟಪಡಿಸಿದರು.
ಸರ್ಕಾರಿ ಗೌರವ:
ಉಪಮೇಯರ್ ರಮೀಳಾ ಉಮಾಶಂಕರ್ ಅಕಾಲಿಕ ನಿಧನ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತರ ಮನವಿ ಮೇರೆಗೆ ಸರ್ಕಾರಿ ಗೌರವ ನೀಡಲು ಸೂಚಿಸಿದ್ದೇನೆ. ಅವರ ಅಂತ್ಯಸಂಸ್ಕಾರದ ವೇಳೆ ಸರ್ಕಾರಿ ಗೌರವ ಒದಗಿಸಲಾಗುವುದು ಎಂದರು.
ನಿನ್ನೆಯಷ್ಟೆ ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಭಾಗವಹಿಸಿದ್ದೆವು. ಆದರೆ ಆಘಾತದ ಸುದ್ದಿ ಬಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರುತ್ತೇವೆ ಎಂದರು.