ಕೇಂದ್ರದ ಯೋಜನೆ ಟೋಕನ್ ಸಿಂಪಥಿಯಾಗಿದೆ; ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಅಸಮಾಧಾನ

ಬೆಂಗಳೂರು,ಅ.5-ಕೇಂದ್ರ ಸರ್ಕಾರ ನಿಗದಿ ಮಾಡಿರುವ ಬೆಂಬಲ ಬೆಲೆ ರೈತರಿಗೆ ಸರಿಯಾಗಿ ತಲುಪುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿರುವ ರಾಜ್ಯ ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ , ಕೇಂದ್ರದ ಯೋಜನೆ ಟೋಕನ್ ಸಿಂಪಥಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಕೃತಿ ತಂತ್ರಜ್ಞರ ಸಂಸ್ಥೆಯ ಸುವರ್ಣ ಮಹೋತ್ಸವದಲ್ಲಿ ರೈತರ ವಿಜ್ಞಾನ ಕಾಂಗ್ರೆಸ್ ಉದ್ಘಾಟಿಸಿ ಮಾತನಾಡಿದ ಅವರು, ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾದಾಗ ರೈತರಿಗೆ ನೆರವು ನೀಡಬೇಕಾದ ಕನಿಷ್ಠ ಬೆಂಬಲ ಈವರೆಗೂ ಯಶಸ್ವಿಯಾಗಿಲ್ಲ. ಈ ಬಗ್ಗೆ ರೈತರೇ ನನಗೆ ದೂರವಾಣಿ ಕರೆ ಮಾಡಿ ಪ್ರಶ್ನೆ ಮಾಡುತ್ತಿದ್ದಾರೆ.

ಬೆಂಬಲ ಬೆಲೆ ನಿಗದಿ ವಿಷಯದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಸಮನ್ವಯತೆ ಇಲ್ಲ. ರಾಜ್ಯ ಸರ್ಕಾರ ಹೇಳುವುದೇ ಬೇರೆ, ಕೇಂದ್ರ ಸರ್ಕಾರ ನಿಗದಿ ಮಾಡುವುದೇ ಬೇರೆ ಎಂಬಂತಾಗಿದೆ. ಹೀಗಾಗಿ ಜನರಿಗೆ ಬೆಂಬಲ ಬೆಲೆಯ ಲಾಭ ಸರಿಯಾಗಿ ತಲುಪುತ್ತಿಲ್ಲ ಎಂದರು.
ರಾಜ್ಯ ಸರ್ಕಾರ ರೈತರಿಗೆ ವೈಜ್ಞಾನಿಕ ಬೆಲೆ ಕೊಡಿಸಲು ವಿಶೇಷ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ಹಾಗೆಯೇ ಮಾರುಕಟ್ಟೆಗೆ ಪ್ರತ್ಯೇಕ ನೀತಿ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ರೈತ ದೇಶದ ಬೆನ್ನಲೆಬು. ಆದರೆ ಆತನಿಗೆ ಸರಿಯಾದ ಸೌಲಭ್ಯ ಕೊಡಲು ನಾವು ವಿಫಲವಾಗಿದ್ದೇವೆ. ರೈತ ಸಮುದಾಯ ಅತ್ಯಂತ ಮೇಧಾವಿಯಾಗಿದ್ದು ತಮ್ಮ ಸಮಸ್ಯೆಗಳನ್ನು ತಾವೇ ಬಗೆಹರಿಸಿಕೊಳ್ಳುವಷ್ಟು ಸಾಮಥ್ರ್ಯ ಅವರಿಗಿದೆ. ಯಾವುದೇ ವಿಜ್ಞಾನಿಗಳ ಸಹಾಯವಿಲ್ಲದೆ ತಾವೇ ನಿರ್ಮಿಸಿಕೊಂಡಿರುವ ನೇಗಿಲು, ಕುಂಟೆಯಂತಹ ಸಲಕರಣೆಗಳನ್ನು ನೋಡಿದರೆ ಅವರ ವೈಜ್ಞಾನಿಕ ಚಿಂತನೆಯ ಬಗ್ಗೆ ಅರಿವಾಗುತ್ತದೆ ಎಂದರು.
ನಗರೀಕರಣ ಹೆಚ್ಚಾದಂತೆಲ್ಲ ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಜನ ನಗರಗಳತ್ತ ವಲಸೆ ಬರುತ್ತಿದ್ದಾರೆ. ಇದು ಕೃಷಿ ಉತ್ಪಾದನೆ ಮೇಲೆ ಭಾರೀ ಆಘಾತ ನೀಡುವ ಆತಂಕವಿದೆ ಎಂದರು.

ಕೃಷಿ ಉತ್ಪನ್ನಗಳನ್ನು ಆನ್‍ಲೈನ್ ಮೂಲಕವೇ ಗುಣಮಟ್ಟ ನಿಗದಿ ಮಾಡುವ ಇ-ಸ್ಯಾಮ್ ಟ್ರೇಡಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ಇದು ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.
ಕೃಷಿ ತಂತ್ರಜ್ಞರ ಸಂಸ್ಥೆ ರಾಜ್ಯದ 16 ಕಡೆ ಅಸ್ಥಿತ್ವದಲ್ಲಿದ್ದು , ಅಲ್ಲಿ ರೈತರ ಸಮಸ್ಯೆಗಳನ್ನು ತಾವುಗಳೇ ಚರ್ಚೆ ಮಾಡಿ ಬಗೆಹರಿಸಿಕೊಳ್ಳುತ್ತಿದ್ದಾರೆ. ಇವರಿಗೆ ಹೆಚ್ಚಿನ ಪೆÇ್ರೀ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮಲ್ಲಪ್ಪ, ಕಾರ್ಯದರ್ಶಿ ಕೆ.ಕೃಷ್ಣಪ್ಪ , ಧಾರವಾಡ ಕೃಷಿ ವಿವಿಯ ಕುಲಪತಿ ಡಾ.ಎಂ.ಬಿ.ಚಟ್ಟಿ , ಬೆಂಗಳೂರು ಕೃಷಿ ವಿವಿಯ ಕುಲಪತಿ ಡಾ.ಎಸ್.ರಾಜೇಂದ್ರಪ್ರಸಾದ್ ಮುಂತಾದವರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ