ತನ್ನ ಸಿದ್ಧಾಂತಗಳನ್ನು ಹೇರುವಸಲುವಾಗಿ ದೇಶದ ಜನರೊಂದಿಗೆ ಯುದ್ಧಕ್ಕಿಳಿದ ಕೇಂದ್ರ ಸರ್ಕಾರ: ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್’ಡಿಎ ಸರ್ಕಾರ ದೇಶದೊಳಗೇ, ದೇಶದ ಜನರೊಂದಿಗೆ ಯುದ್ಧ ಮಾಡುತ್ತಿದ್ದು, ಉಸಿರುಗಟ್ಟಿಸುವ ವಾತಾವರಣವನ್ನು ಸೃಷ್ಟಿಸಿ ತನ್ನ ಸಿದ್ಧಾಂತಗಳನ್ನು ಹೇರುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಹಿಂದೂಸ್ತಾನ್ ಟೈಮ್ಸ್ ಲೀಡರ್ಶಿಪ್ ಶೃಂಗಸಭೆ 2018 ಉದ್ದೇಶಿಸಿ ಮಾತನಾಡಿರುವ ಅವರು, ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು. ಪ್ರಧಾನಿ ಮೋದಿಯವರನ್ನು ಟೀಕಿಸುವವರನ್ನು ವಜಾ ಮಾಡಲಾಗುತ್ತಿದೆ. ಭಾರತವನ್ನು ಅವಮಾನಿಸುವುದು, ಭಾರತೀಯರ ವರ್ಚಸ್ಸನ್ನು ಹಾಳು ಮಾಡುತ್ತಿರುವುದನ್ನು ಇಂದು ನಾವು ನೋಡುತ್ತಿದ್ದೇವೆ. ಸ್ವಂತ ಜನರೊಂದಿಗೆಯೇ ಕೇಂದ್ರ ಸರ್ಕಾರ ಯುದ್ಧ ನಡೆಸುತ್ತಿದ್ದು, ತನ್ನ ಒಂದು ಸಿದ್ಧಾಂತವನ್ನು 1.3 ಬಿಲಿಯನ್ ಜನರ ಮೇಲೆ ಹೇರಲು ಒತ್ತಾಯಿಸಿದೆ ಎಂದರು.

ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡವುದು, ಆರ್ಥಿಕತೆ ನಾಶಗೊಳ್ಳುವಂತೆ ಮಾಡುವುದು, ರುಪಾಯಿ ಮೌಲ್ಯ ಕುಸಿಯುವಂತೆ ಮಾಡುವುದು, ಪೆಟ್ರೋಲ್ ಬೆಲೆ ಏರಿಕೆ ಮಾಡುವುದು ಇದು ಕೇಂದ್ರದ ಯುದ್ಧದ ಅಂಶಗಳಾಗಿದ್ದು, ಇವುಗಳನ್ನೇ ಮುಂದಿರಿಸಿಕೊಂಡು ಎನ್ ಡಿ ಎ ಸರ್ಕಾರ ದೇಶದೊಳಗೇ ಬಿಕ್ಕಟ್ಟಿನ ಸ್ಥಿತಿ ನಿರ್ಮಾಣ ಮಾಡಿದೆ ಎಂದು ಹೇಳಿದರು.

ನೋಟು ನಿಷೇಧದ ಪರಿಣಾದಿಂದಾಗಿ ಬಹುಪಯೋಗಿ ಜಿಎಸ್’ಟಿ ಗೆ ಅಸಂಘಟಿತ ವಲಯ ಬಲಿಯಾಯಿತು. ಲಕ್ಷಾಂತರ ಸಣ್ಣ ಮತ್ತು ಮಧ್ಯಮ ಉದ್ಯಮಗಳು ಕೊಚ್ಚಿಹೋದವು. ಸಾರ್ವಜನಿಕರ ವಿಶ್ವಾಸ ನಾಶವಾಯಿತು. ಜನರ ನಿರೀಕ್ಷೆಗಳು ಆಕ್ರೋಶಗಳಾಗಿ ಪರಿವರ್ತನೆಗಳಾದವು. ದೇಶದ ಮೂಲೆ ಮೂಲೆಗಳಲ್ಲಿ ದಲಿತರು ಹಾಗೂ ಬುಡಕಟ್ಟು ಜನರು ಪ್ರತಿಭಟನೆ ನಡೆಸುವಂತಾಗಿದೆ. ಅಲ್ಪಸಂಖ್ಯಾತರ ಮೇಲೆ ದಾಳಿಗಳು ನಡೆಯುತ್ತಿವೆ. ಪ್ರಧಾನಿ ಮೋದಿಯವರನ್ನು ಟೀಕೆ ಮಾಡಿದ ಕಾರಣಕ್ಕೆ ಮಾಧ್ಯಮಗಳಲ್ಲಿರುವ ನಮ್ಮ ಗೆಳೆಯರನ್ನು ವಜಾಗೊಳಿಸಲಾಗುತ್ತಿದೆ. ಗೌರಿ ಲಂಕೇಶ್ ಬರೆದಿದ್ದ ಬರಹಗಳಿಂದಾಗಿ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಯಿತು ಎಂದು ತಿಳಿಸಿದ್ದಾರೆ.

ಯಾವುದೇ ಹೊಸ ಆಲೋಚನೆಗಳಿಗೆ ಸಹಕಾರಗಳಾಗಲಿ, ಸ್ವಾಗತಗಳಾಗಲಿ ದೊರೆಯುತ್ತಿಲ್ಲ. ಹೊಸ ಚಿಂತನೆಗಳನ್ನು ನಡೆಸುವ ಚಿಂತಕರನ್ನೇ ಹತ್ಯೆಮಾಡಲಾಗುತ್ತಿದೆ. ಸುಪ್ರೀಂಕೋರ್ಟ್ ನ್ಯಾಯಾಧೀಶರೇ ಇಂದು ಹೊರಗೆ ಬಂದು ತಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳುವಂತಹ ಪರಿಸ್ಥಿತಿ ಬಂದೊದಗಿದೆ. ಇಡೀ ದೇಶ ಇಂದು ಹೊತ್ತಿ ಉರಿಯುತ್ತಿದೆ. ಸರ್ಕಾರ ಕೇವಲ ಮೇಕ್ ಇನ್ ಇಂಡಿಯಾ ಮತ್ತು ಕ್ಲೀನ್ ಇಂಡಿಯಾ ಬಗ್ಗೆ ಮಾತನಾಡುತ್ತಿದೆ ಎಂದು ಗುಡುಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ