ಮಾರುಕಟ್ಟೆಯಲ್ಲಿ ಮೀಟರ್ ಬಡ್ಡಿದಂಧೆಗೆ ಕಡಿವಾಣ ಓರ್ವ ಅಧಿಕಾರಿ ಅಮಾನತು
ಬೆಂಗಳೂರು, ಅ.4-ಕೆಆರ್ ಮಾರುಕಟ್ಟೆ ಮಾದರಿಯಲ್ಲೇ ನಗರದ ಇತರ ಮೂರು ಕಡೆ ಬೃಹತ್ ಮಾರುಕಟ್ಟೆ ಸಂಕೀರ್ಣ ನಿರ್ಮಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದರು.
ಬೆಳ್ಳಂಬೆಳಗ್ಗೆ ಮೇಯರ್ ಗಂಗಾಂಬಿಕೆ, ಉಪಮೇಯರ್ ರಮಿಳಾ ಉಮಾಶಂಕರ್, ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್, ನಗರ ಪೆÇಲೀಸ್ ಆಯುಕ್ತ ಸುನಿಲ್ಕುಮಾರ್, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮತ್ತಿತರರೊಂದಿಗೆ ಕೆಆರ್ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮೈಸೂರು ರಸ್ತೆ, ತುಮಕೂರು ರಸ್ತೆ ಮತ್ತು ಹೊಸೂರು ರಸ್ತೆಯಲ್ಲಿ ಬೃಹತ್ ಮಾರುಕಟ್ಟೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಮಾರುಕಟ್ಟೆ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದೆ. ಈ ಅವ್ಯವಸ್ಥೆಗೆಲ್ಲ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ನಾನೇ ಖುದ್ದು ಪರಿಶೀಲನೆ ನಡೆಸಿದ ಸಂದರ್ಭದಲ್ಲೂ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಡಿಸಿಎಂ ಆಕ್ರೋಶ ವ್ಯಕ್ತಪಡಿಸಿದರು.
ಮಾರುಕಟ್ಟೆಯಲ್ಲಿ ಬಹಳಷ್ಟು ವ್ಯಾಪಾರಸ್ಥರು ಬಾಡಿಗೆ ನೀಡದೆ ವ್ಯಾಪಾರ ನಡೆಸುತ್ತಿದ್ದಾರೆ. ವ್ಯಾಪಾರ ಮಾಡುವ ಕಟ್ಟಡಗಳಿಗೆ ಬೀಗ ಹಾಕಿದ್ದಾರೆ. ಹೀಗಾಗಿ ಖಾಲಿ ಇರುವ ಜಾಗವನ್ನು ಪಾರ್ಕಿಂಗ್ ಇಲ್ಲವೆ ಇನ್ನಿತರ ಕೆಲಸಗಳಿಗೆ ಉಪಯೋಗಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಅವ್ಯವಸ್ಥೆಯ ಆಗರವಾಗಿರುವ ಕೆಆರ್ ಮಾರುಕಟ್ಟೆಗೆ ಕಾಯಕಲ್ಪ ನೀಡಲು ನಮ್ಮ ಸರ್ಕಾರ ತೀರ್ಮಾನಿಸಿದೆ. ಇಲ್ಲಿ ಬಾಡಿಗೆ ನೀಡದೆ ವ್ಯಾಪಾರ ಮಾಡುವವರ ಬಗ್ಗೆ ಹಾಗೂ ಬಿಬಿಎಂಪಿ ಆಸ್ತಿ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಅಧಿಕಾರಿಗಳನ್ನು ಕೇಳಿದ್ದೇನೆ ಎಂದರು.
ಹದಿನೈದು ದಿನಗಳೊಳಗೆ ಇಡೀ ಮಾರುಕಟ್ಟೆ ವ್ಯವಸ್ಥಿತವಾಗಿರಬೇಕು ಹಾಗೂ ಇಲ್ಲಿನ ಬೇಜವಾಬ್ದಾರಿ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ಉತ್ತಮ ಅಧಿಕಾರಿಗಳನ್ನು ನಿಯೋಜಿಸುವಂತೆಯೂ ಅವರು ಸೂಚಿಸಿದರು.
ಅಮಾನತು: ಪರಿಶೀಲನೆ ಸಂದರ್ಭದಲ್ಲಿ ಡಿಸಿಎಂ ಅವರು ಮಾರುಕಟ್ಟೆಯೊಳಗೆ ನಿರ್ಮಿಸಲಾಗಿದ್ದ ಸಾಲು ಅಂಗಡಿಗಳು ಯಾವ ಇಲಾಖೆಗೆ ಸೇರಿವೆ ಎಂದು ಪಕ್ಕದಲ್ಲೇ ಇದ್ದ ಮಾರುಕಟ್ಟೆ ಡಿಸಿ ಮುನಿಲಕ್ಷ್ಮಿ ಅವರಿಂದ ಮಾಹಿತಿ ಕೇಳಿದರು.
ಆದರೆ, ಮಾಹಿತಿ ನೀಡಲು ತಬ್ಬಿಬ್ಬಾದ ಮುನಿಲಕ್ಷ್ಮಿ ಅವರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪರಮೇಶ್ವರ್ ಅವರು ಮಾರುಕಟ್ಟೆಯಲ್ಲಿರುವ ಅಂಗಡಿಗಳ ಬಗ್ಗೆ ನಿಮಗೆ ಮಾಹಿತಿ ಇಲ್ಲ ಅಂದರೆ ನೀವು ಈ ಸ್ಥಾನದಲ್ಲಿ ಏಕಿರಬೇಕು? ಕೂಡಲೇ ಇವರನ್ನು ಅಮಾನತುಗೊಳಿಸಿ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಸೂಚಿಸಿದರು.
ಮೀಟರ್ ಬಡ್ಡಿಗೆ ಕಡಿವಾಣ: ಮಾರುಕಟ್ಟೆಯಲ್ಲಿ ಮೀಟರ್ ಬಡ್ಡಿದಂಧೆ ಅವ್ಯಾಹತವಾಗಿ ನಡೆದುಕೊಂಡು ಬರುತ್ತಿದೆ ಎಂಬ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇದೆ. ಇನ್ನು ಕೆಲವೇ ದಿನಗಳಲ್ಲಿ ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕುವಂತೆ ಪೆÇಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದೇನೆ ಎಂದು ಡಿಸಿಎಂ ಹೇಳಿದರು.
ಮಾರುಕಟ್ಟೆಯ ನೆಲಮಹಡಿಯಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ಸಾಕಷ್ಟು ಹಳೆ ವಾಹನಗಳಿವೆ. ಮಾಲೀಕರಿಲ್ಲದ ವಾಹನಗಳನ್ನು ಕೂಡಲೇ ವಶಪಡಿಸಿಕೊಂಡು ಹರಾಜು ಹಾಕುವಂತೆಯೂ ಪೆÇಲೀಸ್ ಆಯುಕ್ತರಿಗೆ ಡಿಸಿಎಂ ಸೂಚಿಸಿದರು.
ತರಾಟೆ: ಮಾರುಕಟ್ಟೆಯಲ್ಲಿ ಕಸ ವಿಲೇವಾರಿ ಕೇಂದ್ರ ಸ್ಥಾಪನೆ ಮಾಡಿದ್ದರೂ ಇದುವರೆಗೂ ಕಸ ಸಂಸ್ಕರಣೆ ಮಾಡದಿರುವ ಅಧಿಕಾರಿಗಳನ್ನು ಪರಮೇಶ್ವರ್ ಅವರು ತರಾಟೆಗೆ ತೆಗೆದುಕೊಂಡರು.
ಕಸ ವಿಲೇವಾರಿಗಾಗಿ ಸ್ಥಾಪಿಸಿರುವ ಕೇಂದ್ರವನ್ನು ಯಾವ ಕಾರಣದಿಂದ ಮುಚ್ಚಿದ್ದೀರ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಡಿಸಿಎಂ ಅವರ ಏಕಾಏಕಿ ಪ್ರಶ್ನೆಯಿಂದ ತಬ್ಬಿಬ್ಬಾದಅಧಿಕಾರಿಗಳು ಉತ್ತರ ಹೇಳಲು ತಡಬಡಾಯಿಸಿದಾಗ ಕಸ ವಿಲೇವಾರಿ ಕೇಂದ್ರ ಏಕೆ ನಿಷ್ಕ್ರಿಯಗೊಂಡಿದೆ ಎಂಬ ಬಗ್ಗೆ ಒಂದು ವಾರದೊಳಗೆ ಮಾಹಿತಿ ನೀಡದಿದ್ದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ನಂತರ ಮೀನು ಮಾರುಕಟ್ಟೆಗೆ ತೆರಳಿದ ಪರಮೇಶ್ವರ್ ಅವರು ಇಲ್ಲಿನ ಅವ್ಯವಸ್ಥೆ ಮತ್ತು ದುರ್ವಾಸನೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಈ ಕೂಡಲೇ ಇಲ್ಲಿರುವ ಕಸವನ್ನು ತೆರವುಗೊಳಿಸಿ ಶುಚಿತ್ವ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.