ರೈತರ ಮೇಲೆ ಲಾಠಿ ಚಾರ್ಜ್‍ಗೆ ಕೋಡಿಹಳ್ಳಿ ಚಂದ್ರ ಶೇಖರ್ ಖಂಡನೆ

ಬೆಂಗಳೂರು, ಅ.4- ದೆಹಲಿಯಲ್ಲಿ ತಮ್ಮ ಕಷ್ಟ ಹೇಳಿಕೊಳ್ಳಲು ಹೋದ ರೈತರ ಮೇಲೆ ಲಾಠಿ ಚಾರ್ಜ್ ಹಾಗೂ ಜಲಫಿರಂಗಿ ಮಾಡುವ ಅನ್ನದಾತರನ್ನು ನಿಕೃಷ್ಟವಾಗಿ ಕಾಣಲಾಗಿದೆ ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ನಾಯಕ ಮಹೇಂದ್ರಸಿಂಗ್ ಟೇಕಾಯತ್‍ರ ಗ್ರಾಮದಲ್ಲಿರುವ ಅವರ ಸಮಾಧಿ ಸ್ಥಳದಿಂದ ಸಾವಿರಾರು ರೈತರು ಶಾಂತಿಯುತ ಜಾಥಾ ಪ್ರಾರಂಭಿಸಿದ್ದರು. ಅ.2ರಂದು ದೆಹಲಿಯಲ್ಲಿ ಮಹಾತ್ಮಗಾಂಧೀಜಿಯವರ ಸಮಾಧಿಗೆ ನಮಸ್ಕರಿಸಿ ಸಮೀಪದಲ್ಲೇ ಇರುವ ಕಿಸಾನ್‍ಘಾಟ್‍ನ ಚರಣ್‍ಸಿಂಗ್ ಸಮಾಧಿ ಸ್ಥಳದಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಕಾಲ್ನಡಿಗೆಯಲ್ಲಿ ಬರುತ್ತಿದ್ದರು.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಾಗಲಿ ಅಥವಾ ಸಂಬಂಧಪಟ್ಟ ಪ್ರಮುಖರು ರೈತರನ್ನು ಮಾತನಾಡಿಸಿ ಸಮಾಧಾನ ಹೇಳಬಹುದಿತ್ತು. ಆದರೆ, ಇದಾವುದನ್ನೂ ಮಾಡದೆ ನಿರ್ದಾಕ್ಷಿಣ್ಯವಾಗಿ ಲಾಠಿ ಪ್ರಹಾರ ಮಾಡಲಾಗಿದೆ ಎಂದು ಖಂಡಿಸಿದರು.
ರೈತರ ಉತ್ಪನ್ನಗಳಿಗೆ ಡಾ.ಸ್ವಾಮಿನಾಥನ್ ಅವರ ವರದಿ ಆಧರಿಸಿ ಲಾಭಾಂಶವನ್ನು ನೀಡುತ್ತೇವೆ ಎಂದು ಮೋದಿ ಹೇಳಿದ್ದರು. ಆದರೆ, ನಂತರ ಅವರು ಮಾತು ತಪ್ಪಿಸಿದ್ದಾರೆ. ರೈತರ ಸಮಸ್ಯೆ ಆಲಿಸುತ್ತಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ದೂರಿದರು.
ಅಲ್ಲದೆ, ಉತ್ತರ ಪ್ರದೇಶದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ ನರೇಂದ್ರ ಮೋದಿ ಅವರು ನಂತರ ಅದರ ಬಗ್ಗೆ ಚಕಾರ ಎತ್ತಿಲ್ಲ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ದಾವಣಗೆರೆಯ ಚಿನ್ನಸಮುದ್ರ, ಶೇಖರ್‍ನಾಯಕ್, ರಾಜ್ಯ ಕಾರ್ಯದರ್ಶಿಗಳಾದ ಮಹಂತೇಶ್ ಪೂಜಾರ್, ಹಿಟ್ಟೂರ್‍ರಾಜ್, ರೈತ ಮುಖಂಡ ಎನ್.ಎ.ನಾಗರಾಜ್ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ