ಬೆಂಗಳೂರು: ಮೈತ್ರಿ ಸರ್ಕಾರದ ಬಹುನಿರೀಕ್ಷೆಯ ಸಚಿವ ಸಂಪುಟ ವಿಸ್ತರಣೆ ಇದೇ ತಿಂಗಳ 11 ಅಥವಾ 12ಕ್ಕೆ ಆಗುವ ಸಾಧ್ಯತೆ ಇದೆ. ವಿಸ್ತರಣೆಯ ಸುಳಿವು ಅರಿತ ಕಾಂಗ್ರೆಸ್ ಸಚಿವಾಕಾಂಕ್ಷಿಗಳು ದೆಹಲಿಗೆ ತೆರಳಿ, ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸುವ ಸಿದ್ಧತೆಯಲ್ಲಿದ್ದಾರೆ.
ಮೈತ್ರಿ ಸರ್ಕಾರದಲ್ಲಿ ಉಳಿದಿರುವ 7 ಸಚಿವ ಸ್ಥಾನಗಳಲ್ಲಿ ಕಾಂಗ್ರೆಸ್ ಪಾಲಿಗೆ ಆರು ಸ್ಥಾನಗಳು ಇವೆ. ಈ ಸ್ಥಾನಗಳಿಗೆ 22ಕ್ಕೆ ಹೆಚ್ಚು ಶಾಸಕರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಈಗಾಗಲೇ ರಾಜ್ಯಮಟ್ಟದಲ್ಲಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಡಿಕೆಶಿ ಮೇಲೆ ಆಕಾಂಕ್ಷಿಗಳು ಒತ್ತಡ ಹೇರಿದ್ದಾರೆ. ಇದೀಗ ದೆಹಲಿಯಲ್ಲೇ ಬೀಡು ಬಿಟ್ಟು ಲಾಬಿ ನಡೆಸಲು ಮುಂದಾಗಿದ್ದಾರೆ.
ಕಡಿಮೆ ಸ್ಥಾನಗಳಿಗೆ ಹೆಚ್ಚು ಸಚಿವಾಕಾಂಕ್ಷಿಗಳು ಇರುವುದರಿಂದ ಒಬ್ಬರಿಗೆ ಸ್ಥಾನ ನೀಡಿದರೆ, ಮತ್ತೊಬ್ಬರ ಅಸಮಾಧಾನ ಹೆಚ್ಚುತ್ತದೆ. ಆಗ ಮತ್ತೆ ಮೈತ್ರಿ ಸರ್ಕಾರದ ಅಸ್ತಿತ್ವಕ್ಕೆ ಸಂಚಕಾರ ಬಂದೊದಗಬಹುದು. ಕನಿಷ್ಠ ಪಕ್ಷ ಲೋಕಸಭೆ ಚುನಾವಣೆವರೆಗಾದರೂ ಸರ್ಕಾರ ಆಡಳಿತದಲ್ಲಿ ಇರಬೇಕು ಎಂದು ಯೋಚಿಸುತ್ತಿರುವ ಹೈಕಮಾಂಡ್ ಸದ್ಯಕ್ಕೆ ವಿಸ್ತರಣೆ ಎಂಬ ಜೇನುಗೂಡಿಗೆ ಕೈ ಹಾಕುವುದು ಬೇಡ ಎಂಬ ಚಿಂತನೆಯಲ್ಲಿದೆ ಎನ್ನಲಾಗಿದೆ. ವಿಸ್ತರಣೆ ಮಾಡಿದರೂ ಕಷ್ಟ, ಮಾಡದಿದ್ದರೂ ಕಷ್ಟ ಎನ್ನುವ ಗೊಂದಲದಲ್ಲಿ ಹೈಕಮಾಂಡ್ ಸಿಲುಕಿಕೊಂಡಿದೆ.
ಲೋಕಸಭೆ ಚುನಾವಣೆಗೂ ಮುನ್ನ ವಿಸ್ತರಣೆಯಾದರೆ, ಅತೃಪ್ತ ಶಾಸಕರು ಪಕ್ಷದ ವಿರುದ್ಧ ಕೆಲಸ ಮಾಡುತ್ತಾರೆ ಅನ್ನುವ ಭೀತಿ ಕಾಂಗ್ರೆಸ್ ಹೈಕಮಾಂಡ್ದು. ಹಾಗಾಗಿ ಅಳೆದು ತೂಗಿ ವಿಸ್ತರಣೆ ಮಾಡಲು ಮುಂದಾಗಿದೆ. ಇದೇ 6 ಕ್ಕೆ ಸಂಪುಟ ವಿಸ್ತರಣೆ ವಿಚಾರ ಸಂಬಂಧ ಕಾಂಗ್ರೆಸ್ ಜೊತೆ ಚರ್ಚಿಸಲು ಸಿಎಂ ಎಚ್ಡಿಕೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಶಾಸಕ ಸಂಗಮೇಶ್ ಸಂಗಡಿಗರಿಂದ ಪ್ರತಿಭಟನೆ
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಶಾಸಕ ಸಂಗಮೇಶ್ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ, ಸಿದ್ದರಾಮಯ್ಯ ಮನೆ ಮುಂದೆ ಸಂಗಮೇಶ್ ಬೆಂಬಲಿಗರು ಬುಧವಾರ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಪಟ್ಟು ಹಿಡಿದಿದ್ದಾರೆ.
ಎರಡು ಬಸ್ ಗಳಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಬಂದಿರುವ ಸಂಗಮೇಶ್ ಬೆಂಬಲಿಗರು ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಉಳಿವಿಗಾಗಿ ಬಿ.ಕೆ. ಸಂಗಮೇಶ್ ಅವರಿಗೆ ಸಚಿವ ಸ್ಥಾನ ನೀಡಲೇಬೇಕೆಂದು ಪಟ್ಟು ಹಿಡಿದಿದ್ದಾರೆ. ಇಂದು ಸಿದ್ದರಾಮಯ್ಯ, ಪರಮೇಶ್ವರ್ , ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದ್ದಾರೆ.