ಬೆಂಗಳೂರು, ಅ.2- ಗಾಂಧೀಜಿ ನನ್ನೊಬ್ಬಳಿಗೆ ಮಾತ್ರ ಅಜ್ಜನಲ್ಲ ಇಡೀ ದೇಶಕ್ಕೆ ಅಜ್ಜನಾಗಿದ್ದಾರೆ ಎಂದು ಗಾಂಧೀಜಿಯವರ ಮೊಮ್ಮಗಳು ಸುಮಿತ್ರಾ ಗಾಂಧಿ ಕುಲಕರ್ಣಿ ತಿಳಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿಂದು ಏರ್ಪಡಿಸಿದ್ದ ಗಾಂಧಿಜಯಂತಿ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಗಾಂಧಿ ಜಯಂತಿಯನ್ನು ಆಚರಿಸುವುದು ತುಂಬಾ ಸಂತೋಷವಾಗಿದೆ. ಗಾಂಧೀಜಿ ಅವರನ್ನು ಪೂಜಿಸುವುದು ಅವರವರ ಇಷ್ಟಕ್ಕೆ ಬಿಟ್ಟ ವಿಚಾರವಾಗಿದೆ ಎಂದರು.
ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಯುವಕರು ಚಿಂತನೆ ನಡೆಸಬೇಕಾಗಿದೆ. ಗಾಂಧೀಜಿ ಅವರು ತಮ್ಮ ಜೀವಿತಾವಧಿಯಲ್ಲಿ ದೇಶದ ಒಳಿತಿಗಾಗಿ ಹಲವಾರು ಮಾರ್ಗಗಳನ್ನು ನೀಡಿದ್ದಾರೆ ಎಂದರು.
ಗಾಂಧಿ ಅವರ ಮರಣದ ನಂತರ ಅಧಿಕಾರಕ್ಕೆ ಬಂದಿರುವವರು ಅವರವರ ಹಾದಿಯಲ್ಲಿಯೇ ಚಿಂತನೆ ನಡೆಸುತ್ತಿದ್ದಾರೆ. ಯುವಕರು ಗಾಂಧೀಜಿ ಅವರ ಮಾರ್ಗದರ್ಶನಗಳನ್ನು ಅಳವಡಿಸಿಕೊಂಡು ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಬೇಕು.
ರಾಹುಲ್ಗಾಂಧಿ ಅವರು ಹೋದ ಕಡೆಯಲ್ಲೆಲ್ಲ ಗಾಂಧೀಜಿ ಅವರ ಹೆಸರನ್ನು ಬಳಸುತ್ತಿದ್ದಾರಲ್ಲ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗಾಂಧೀಜಿ ಅವರು ನಮ್ಮ ಕುಟುಂಬಕ್ಕೆ ಮಾತ್ರ ಸೀಮಿತರಾದವರಲ್ಲ. ಅವರ ವ್ಯಕ್ತಿತ್ವವನ್ನು ಎಲ್ಲರೂ ಅನುಸರಿಸುತ್ತಾರೆ. ಅವರ ಹೆಸರನ್ನು ಬಳಸಿಕೊಂಡರೆ ಅದರಲ್ಲಿ ಆಶ್ಚರ್ಯಪಡುವಂತಹುದೇನೂ ಇಲ್ಲ ಎಂದರು.
ಗಾಂಧೀಜಿ ಅವರ ಕುಟುಂಬದ ಆತ್ಮೀಯರಾದ ರಾಚಪ್ಪ, ಪ್ರೆಸ್ಕ್ಲಬ್ನ ಅಧ್ಯಕ್ಷ ಸದಾಶಿವ ಶೆಣೈ, ಕಾರ್ಯದರ್ಶಿ ಕಿರಣ್ಕುಮಾರ್ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.